ನವದೆಹಲಿ: ರಾಜ್ಯ ಬಿಜೆಪಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪಕ್ಷದ ವರಿಷ್ಠರು ಯಾವುದೇ ಗಳಿಗೆಯಲ್ಲಿ ಸಭೆ ಸೇರುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಯಡಿಯೂರಪ್ಪ ಬಣದ ಮುಖಂಡರು ಸೋಮವಾರ ದೆಹಲಿಗೆ ಧಾವಿಸುತ್ತಿದ್ದು ರಾಜ್ಯ ಬಿಜೆಪಿ ಬಿಕ್ಕಟ್ಟು ಕುರಿತು ವರಿಷ್ಠರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಇವರೆಲ್ಲರಿಗೂ ದೆಹಲಿಗೆ ಬರುವಂತೆ ತಿಳಿಸಲಾಗಿದೆ.
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಪುತ್ರನ ಮದುವೆ ಆರತಕ್ಷತೆ ಸಮಾರಂಭ ಹಾಗೂ ರಾಷ್ಟ್ರಪತಿ ಚುನಾವಣೆ ಸಂಬಂಧ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎನ್‌ಡಿಎ ಮುಖ್ಯಮಂತ್ರಿಗಳ ಸಭೆಯಲ್ಲಿ ಸದಾನಂದಗೌಡರು ಭಾಗವಹಿಸಲಿದ್ದಾರೆ.
ಅನಂತರ ಪಕ್ಷದ ವರಿಷ್ಠರ ಜತೆ ಬಿಜೆಪಿ ಬೆಳವಣಿಗೆ ಕುರಿತು ಚರ್ಚಿಸಲಿದ್ದಾರೆ. ಅನಂತರ ಪಕ್ಷದ ವರಿಷ್ಠರು ಕರ್ನಾಟಕದ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಬೆಂಬಲಿಗ ಸಚಿವರ ರಾಜೀನಾಮೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಬೆಂಗಳೂರಿಗೆ ತೆರಳಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ರಾಜಧಾನಿಗೆ ಹಿಂತಿರುಗಿದ್ದಾರೆ.
ಹಿರಿಯ ಮುಖಂಡರಾದ ಗಡ್ಕರಿ, ಅರುಣ್ ಜೇಟ್ಲಿ ಅವರಿಗೆ ರಾಜ್ಯದ ಬೆಳವಣಿಗೆ ಕುರಿತು ವಿವರಿಸಿದ್ದಾರೆ. `ಬಿಜೆಪಿ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸವಿದೆ. ಹೇಗೆ ಹಾಗೂ ಯಾವಾಗ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿವರಗಳನ್ನು ಬಹಿರಂಗಪಡಿಸಲಾರೆ~ ಎಂದು ಪ್ರಧಾನ್ `ಪ್ರಜಾವಾಣಿ~ಗೆ ತಿಳಿಸಿದರು.
ಸದಾನಂದಗೌಡರ ಬದಲಾವಣೆಗೆ ಯಡಿಯೂರಪ್ಪ ಬಣ ಜುಲೈ 5ರವರೆಗೆ ಗಡುವು ನೀಡಿದೆ. ಈ ಗಡುವು ಕೈಬಿಡುವಂತೆ ವರಿಷ್ಠರು ಮನವಿ ಮಾಡಿದ್ದಾರೆ. ಈ ಮನವಿಗೆ ಮನ್ನಣೆ ಸಿಕ್ಕಿಲ್ಲ.
`ನಮ್ಮ ಗಡುವು ಮುಗಿಯುವವರೆಗೆ ಕಾಯುತ್ತೇವೆ. ಮುಖ್ಯಮಂತ್ರಿ ಬದಲಾವಣೆ ಮಾಡದಿದ್ದರೆ ನಾವೂ ರಾಜೀನಾಮೆ ನೀಡುತ್ತೇವೆ~ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜ್ ಹೇಳಿದ್ದಾರೆ.
ಇಕ್ಕಟ್ಟು: ಸದಾನಂದಗೌಡರ ಬದಲಾವಣೆಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ಇಕ್ಕಟ್ಟಿಗೆ ಸಿಕ್ಕಿದ್ದಾರೆ.
ಜಗದೀಶ್‌ಶೆಟ್ಟರ್ ಅವರನ್ನು ಗೌಡರ ಉತ್ತರಾಧಿಕಾರಿಯಾಗಿ ನೇಮಿಸುವ ಕುರಿತು ಗಡ್ಕರಿ ಮತ್ತು ಜೇಟ್ಲಿ ಬಲವಾಗಿ ಪ್ರತಿಪಾದಿಸುತಿದ್ದಾರೆ. ಆದರೆ, ಅಡ್ವಾಣಿ ಒಳಗೊಂಡಂತೆ ಕೆಲವರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಏನೇ ಆದರೂ ನಾಯಕತ್ವ ಪ್ರಶ್ನೆ ಕುರಿತು ತೀರ್ಮಾನ ಮಾಡಲು ಜುಲೈ 18ರ ರಾಷ್ಟ್ರಪತಿ ಚುನಾವಣೆ ಮುಗಿಯಬೇಕು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಅಡ್ವಾಣಿ ನಿಲುವು: ಸದಾನಂದಗೌಡರನ್ನು ಬದಲಾವಣೆ ಮಾಡುವ ವಿಷಯದಲ್ಲಿ ಈಗಲೂ ವರಿಷ್ಠರಲ್ಲಿ ಒಮ್ಮತ ಮೂಡಿಲ್ಲ. ಯಾವ ಕಾರಣಕ್ಕೆ ಅವರನ್ನು ಬದಲಾವಣೆ ಮಾಡಬೇಕೆಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ಮೇಲಿಂದ ಮೇಲೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟಿನಿಂದ ಮುಜಗರಕ್ಕೊಳಗಾಗಿರುವ ಅಡ್ವಾಣಿ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ಎದುರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಬೆನ್ನೆಲುಬು. ಯಡಿಯೂರಪ್ಪ ಈ ಸಮುದಾಯದ ಪ್ರಶ್ನಾತೀತ ನಾಯಕ. ಅವರನ್ನು ಬಿಟ್ಟು ವಿಧಾನಸಭೆ ಚುನಾವಣೆಗೆ ಹೋಗುವುದು ಕಷ್ಟ ಎಂದು ಈ ಗಡ್ಕರಿ ಮತ್ತು ಜೇಟ್ಲಿ ಪ್ರತಿಪಾದಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜ್ಯ ವಿಧಾನಸಭೆ ಅವಧಿ ಬರುವ ಮೇ ತಿಂಗಳಿಗೆ ಅಂತ್ಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.