ADVERTISEMENT

ಇಟ್ಟಿಗೆಗೂಡು ಕುಸಿದು 5 ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST
ಇಟ್ಟಿಗೆಗೂಡು ಕುಸಿದು 5 ಸಾವು
ಇಟ್ಟಿಗೆಗೂಡು ಕುಸಿದು 5 ಸಾವು   

ತುಮಕೂರು:  ಇಟ್ಟಿಗೆ ಗೂಡಿನ ಗೋಡೆ ಕುಸಿದು ನಾಲ್ವರು ಮಹಿಳೆಯರು ಸೇರಿದಂತೆ ಐವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಕುಪ್ಪೂರು ಸಮೀಪದ ತೋಟದಲ್ಲಿ ಬುಧವಾರ ನಡೆದಿದೆ.

ನಗರದ ಶಿರಾಗೇಟ್ ಬಳಿಯ ನರಸಾಪುರ ಗ್ರಾಮದ ಜಯಮ್ಮಲಕ್ಷ್ಮಯ್ಯ (40), ಭಾಗ್ಯಮ್ಮ (16), ಗಂಗಮ್ಮ (22), ಸುಶೀಲಮ್ಮ (45) ಮತ್ತು ಸಿದ್ದರಾಜು (35) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡಿರುವ ಹೊನ್ನೇನಹಳ್ಳಿ ಗ್ರಾಮದ ನಾಗರತ್ನಮ್ಮ (20) ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಪುಡಿ ಇಟ್ಟಿಗೆಗಳನ್ನು ಸುರಿಯಲು ಆಗತಾನೆ ಹೊರಕ್ಕೆ ಬಂದಿದ್ದ ಪುಟ್ಟಮ್ಮ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ.

ನಗರದ ಹೊರ ವಲಯದ ಕುಪ್ಪೂರು ಸಮೀಪದ ಬಾಬು ಅವರ ಜಮೀನನಲ್ಲಿ ಹೊನ್ನೇನಹಳ್ಳಿ ಗಂಗಣ್ಣ ಎಂಬಾತ ಎಂಜಿಬಿ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದರು.

ಇಟ್ಟಿಗೆ ಸುಡಲು ನಿರ್ಮಿಸಲಾಗಿದ್ದ ಗೂಡಿನ ಎರಡು ಶಿಥಿಲ ಗೋಡೆಗಳ ನಡುವೆ ಇಟ್ಟಿಗೆ ಜೋಡಿಸುತ್ತಿದ್ದ ಕಾರ್ಮಿಕರ ಮೇಲೆ ಬೆಳಿಗ್ಗೆ 11 ಗಂಟೆಯಲ್ಲಿ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ.

ತೋಟದ ಸಮೀಪದಲ್ಲಿದ್ದ ಶ್ರೀದೇವಿ ಪದವಿ ಕಾಲೇಜು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಕುಸಿದ ಗೋಡೆ ತೆರವುಗೊಳಿಸುವಷ್ಟರಲ್ಲಿ ಐವರು ಸಾವನ್ನಪ್ಪಿದ್ದರು. ಅವಘಡದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಕಾನೂನಿನಂತೆ ಪರಿಹಾರ ನೀಡಲು ಶೀಘ್ರ ಕ್ರಮತೆಗೆದುಕೊಳ್ಳುವುದಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.

ಕಾರ್ಖಾನೆ ಮೂಲ ಮಾಲೀಕರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಮಾಲೀಕರ ವಿರುದ್ಧ ದೂರು ದಾಖಲಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಡಾ.ಪಿ.ಎಸ್.ಹರ್ಷ ಹೇಳಿದರು.

ಇಟ್ಟಿಗೆ ಕಾರ್ಖಾನೆ ಸ್ಥಾಪಿಸಲು ಮಾಲೀಕರು ಅಧಿಕೃತವಾಗಿ ಯಾವುದೇ ಪರವಾನಗಿ ಪಡೆದಿರಲಿಲ್ಲ. ಅಲ್ಲದೆ ಕಾರ್ಮಿಕರಿಗೆ ಯಾವುದೇ ವಿಮಾ ಸೌಲಭ್ಯ ಮಾಡಿಸಿಲ್ಲ ಎನ್ನಲಾಗಿದೆ. ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.