ADVERTISEMENT

ಇನ್ನು ಸೀಮೆ ಎಣ್ಣೆಗೂ ತೂಕ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ತುಮಕೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ಸೀಮೆ ಎಣ್ಣೆ ಅಳೆದು ಕೊಡುವ ಬದಲಿಗೆ ತೂಕ ಮಾಡಿ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜೀವರಾಜ್ ಇಲ್ಲಿ ಬುಧವಾರ ಹೇಳಿದರು.

ಸೀಮೆ ಎಣ್ಣೆಗೆ ಸೋಪು ಮತ್ತಿತರ ರಾಸಾಯನಿಕ ಬೆರೆಸಿ ನೊರೆ ಬರಿಸಿ ಅಳತೆಯಲ್ಲಿ ಮೋಸ ಮಾಡಿ ವಿತರಿಸಲಾಗುತ್ತಿದೆ ಎಂಬ ಆರೋಪವಿದೆ. ಇದನ್ನು ತಪ್ಪಿಸಲು ತೂಕ ಮಾಡಿ ಕೊಡುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸಲು ಜಿಲ್ಲೆಯಲ್ಲಿ ವಿದ್ಯುನ್ಮಾನ ತೂಕದ ಯಂತ್ರಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಯಶಸ್ಸು ಕಂಡಿರುವುದನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುನ್ಮಾನ ಯಂತ್ರದ ಮೂಲಕ ಪಡಿತರ ವಿತರಿಸುವ ಸೌಲಭ್ಯವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದರು.

ವಿದ್ಯುನ್ಮಾನ ಯಂತ್ರದಲ್ಲಿ ಕುಟುಂಬದ ಇಬ್ಬರು ಎಡಗೈ ಹೆಬ್ಬೆಟ್ಟು ನೋಂದಾಯಿಸಬೇಕು. ಪಡಿತರ ಪಡೆಯುವ ಸಮಯದಲ್ಲಿ ಇಬ್ಬರಲ್ಲಿ ಯಾರಾದರೊಬ್ಬರು ಯಂತ್ರದಲ್ಲಿ ಹೆಬ್ಬೆಟ್ಟು ಒತ್ತಿದರೆ ಕಾರ್ಡಿನ ವಿವರ ತೆರೆದುಕೊಳ್ಳುತ್ತದೆ. ಈ ಯಂತ್ರದಲ್ಲಿ ಆಯಾ ತಿಂಗಳು ಸಿಗುವ ಪಡಿತರ ವಿವರ ಲಭ್ಯವಾಗುತ್ತದೆ. ತಮಗೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಪಡಿತರ ಪಡೆದುಕೊಳ್ಳಬಹುದು. ಉಳಿದ ಪಡಿತರವನ್ನು ಮತ್ತೊಮ್ಮೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪಡಿತರ ಮಾರಾಟ ದರ, ವಿತರಣೆ ಪ್ರಮಾಣದ ವಿವರಗಳನ್ನು ಯಂತ್ರದಲ್ಲಿ ಅಳವಡಿಸಿರುವ ಸ್ಪೀಕರ್ ಮೂಲಕ ಕೇಳಬಹುದು. ಪಡಿತರ ವಿತರಿಸಿದ ವಿವರಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಅನಧಿಕೃತ ವ್ಯಕ್ತಿಗಳು ಪಡಿತರ ಪಡೆಯಲು ಸಾಧ್ಯವಿಲ್ಲ ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.