ADVERTISEMENT

ಇಫ್ತಾರ್ ವಿರೋಧ ಪರಧರ್ಮ ದ್ವೇಷದ ಪರಮಾವಧಿ

ಸೌಹಾರ್ದಕ್ಕಾಗಿ ಮಾಡಿದ ಪ್ರಯತ್ನ ದಿಂದಾಗಿ ಹಿಂದೂ ಧರ್ಮದ ಗೌರವ ಬೆಳೆದಿದೆ : ವಿಶ್ವೇಶತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಇಫ್ತಾರ್ ವಿರೋಧ ಪರಧರ್ಮ ದ್ವೇಷದ ಪರಮಾವಧಿ
ಇಫ್ತಾರ್ ವಿರೋಧ ಪರಧರ್ಮ ದ್ವೇಷದ ಪರಮಾವಧಿ   

ಉಡುಪಿ: ‘ಇಫ್ತಾರ್ ಕೂಟವನ್ನು ವಿರೋಧಿಸುತ್ತಿರುವುದು ಪರಧರ್ಮ ದ್ವೇಷದ ಪರಮಾವಧಿ. ಯಾರಿಗೂ ಇಷ್ಟೊಂದು ದ್ವೇಷ ಇರಬಾರದು.  ಶಾಸ್ತ್ರ, ಧರ್ಮಾಚರಣೆ ಗೊತ್ತಿಲ್ಲದವರು ಈ ರೀತಿ ವಿರೋಧ ಮಾಡುತ್ತಿರುವುದು ಶೋಚನೀಯ. ಅವರಿಗೆ ವಿರೋಧಿಸುವ ಹಕ್ಕಿಲ್ಲ’  ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು.

ಶ್ರೀರಾಮ ಸೇನೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿರುವ ಕುರಿತು  ಭಾನುವಾರ ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಸೌಹಾರ್ದಕ್ಕಾಗಿ ಮಾಡಿದ ಪ್ರಯತ್ನ ದಿಂದಾಗಿ ಹಿಂದೂ ಧರ್ಮದ ಗೌರವ ಬೆಳೆದಿದೆ. ದ್ವೈತ, ಅದ್ವೈತ ಮತಗಳ ಮಧ್ಯೆ ಹೇಗೆ ಸಹಿಷ್ಣುತೆ ಇದೆಯೋ, ಇತರ ಧರ್ಮಗಳೊಂದಿಗೂ ಅದೇ ಭಾವನೆ ಇರ ಬೇಕು. ನಮ್ಮದು ಮಾಧ್ವ ಸಂಪ್ರದಾಯ ವಾದರೂ ಮಠಕ್ಕೆ ಬರುವವರು ಅವರದ್ದೇ ಆದ ಅನುಷ್ಠಾನಗಳನ್ನು ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಅಪಚಾರವಾ ಗದು. ಶೈವರು ಶಿವನೇ ಶ್ರೇಷ್ಠ ಎನ್ನುತ್ತಾರೆ, ಆಗಲೂ ಪಾವಿತ್ರ್ಯಕ್ಕೆ ಧಕ್ಕೆಯಾಗದು. ಬೇರೆ ಮತ, ಧರ್ಮದವರು ಬಂದು ಕೃಷ್ಣ ಮಠದಲ್ಲಿ ಊಟ ಮಾಡಿದರೆ ಅದನ್ನು ತಡೆಯುತ್ತೇವೆಯೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಈ ರೀತಿಯ ಪ್ರತಿಭಟನೆಗಳಿಂದ ನಾನು ವಿಚಲಿತನಾಗಿಲ್ಲ. ಹಿಂಸೆಗೆ ಎಂದಿಗೂ ಪ್ರಚೋದನೆ ನೀಡುವುದಿಲ್ಲ. ವಿರೋಧಿಗಳ ಪ್ರಶ್ನೆಗೆ ಉತ್ತರ ನೀಡಿದರೆ ಘರ್ಷಣೆ ಇನ್ನಷ್ಟು ಹೆಚ್ಚಾಗಲಿದೆ. ರಾಮ ಜನ್ಮಭೂಮಿ ಹೋರಾಟದಲ್ಲಿದ್ದವರು ಹೇಗೆ ಇಫ್ತಾರ್ ಮಾಡಿದರು ಎಂದು ಕೆಲವರು ಪ್ರಶ್ನಿಸಿದ್ದಾರೆ.

ಸ್ವಾಮೀಜಿ ತಮ್ಮ ನಿಲುವು ಬದಲಾಯಿಸಿದ್ದಾರೆ ಎಂದು ಬುದ್ಧಿಜೀವಿಗಳು ಹೇಳಿದ್ದಾರೆ. ಆದರೆ, ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆಯ ನನ್ನ ನಿಲುವು ಬದಲಾಗಿಲ್ಲ. ಧರ್ಮಕ್ಕೆ ಧಕ್ಕೆಯಾದರೆ ಹೋರಾಟ ಮಾಡುತ್ತೇನೆ’ ಎಂದರು. ‘ಮುಸಲ್ಮಾನರು ದೇವಸ್ಥಾನದ ಒಳಗೆ ನಮಾಜ್ ಮಾಡಿಲ್ಲ, ಆದ್ದರಿಂದ ಅವರ ಧರ್ಮಕ್ಕೂ ಅಪಚಾರವಾಗಿಲ್ಲ’ ಎಂದರು.

***

ಬರುವ ವರ್ಷ ಪರ್ಯಾಯ ಪೀಠದಲ್ಲಿ ನಾವು ಇರುವುದಿಲ್ಲ, ಆದ್ದರಿಂದ ಕೃಷ್ಣ ಮಠದಲ್ಲಿ ಇಫ್ತಾರ್ ಮಾಡುವ ಪ್ರಶ್ನೆ ಉದ್ಭವಿಸದು. ಬೇರೆ ಕಡೆ ಮಾಡುವ ಬಗ್ಗೆ ಪರಿಸ್ಥಿತಿ ವಿಶ್ಲೇಷಿಸಿ ತೀರ್ಮಾನ ಮಾಡಲಾಗುವುದು
ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
***

ಶ್ರೀರಾಮ ಸೇನೆ, ಹಿಂದೂ ಜನ ಜಾಗೃತಿ ಸಮಿತಿಯಿಂದ ಪ್ರತಿಭಟನೆ
ಉಡುಪಿ:
ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿ ನಮಾಜ್ ಮಾಡಲು ಅವಕಾಶ ನೀಡಿದ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಡೆ ಖಂಡಿಸಿ ಶ್ರೀರಾಮ ಸೇನೆ ಮತ್ತು ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರು ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಭಾನುವಾರ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ, ಭಜನೆ ಮಾಡುವ ಮೂಲಕ ವಿನೂತನ  ಪ್ರತಿಭಟನೆ ನಡೆಸಿದರು.

ಶ್ರೀರಾಮ ಸೇನೆಯ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್ ಮಾತನಾಡಿ, ‘ಪೇಜಾವರ ಶ್ರೀಗಳ ಈ ನಡೆಯಿಂದ ಹಿಂದೂಗಳ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಕೃಷ್ಣನಿಗೆ ಪೂಜೆ ಸಲ್ಲಿಸಿ ಭಜನೆ ಮಾಡುವ ಮೂಲಕ ನಮ್ಮ ನೋವನ್ನು ವ್ಯಕ್ತಪಡಿಸಿದ್ದೇವೆ. ಇದು ಸ್ವಾಮೀಜಿ ಅವರ ವಿರುದ್ಧ ಪ್ರತಿಭಟನೆ ಅಲ್ಲ ಮತ್ತು ಗಲಭೆ ಸೃಷ್ಟಿಸುವ ಉದ್ದೇಶವೂ ಇಲ್ಲ. ಅವರು ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತಿರುವ ಶ್ರೇಷ್ಠ ಯತಿಗಳು’  ಎಂದರು.

‘ಮಠದಿಂದ ಹೊರಗೆ ಬೇರೆ ಸ್ಥಳದಲ್ಲಿ ಇಫ್ತಾರ್ ಕೂಟ ಆಯೋಜಿಸಲು ಮತ್ತು ಅಲ್ಲಿ ನಮಾಜ್‌ಗೆ ಅವಕಾಶ ನೀಡಲು ನಮ್ಮ ವಿರೋಧ ಇಲ್ಲ.  ಮಠದ ಹೊರಗೆ ಇಫ್ತಾರ್ ಆಯೋಜಿಸಿ ಆಹ್ವಾನಿಸಿದ್ದರೆ ನಾವು ಪಾಲ್ಗೊಳ್ಳುತ್ತಿದ್ದೆವು’ ಎಂದು ಹೇಳಿದರು.

ಪೊಲೀಸ್ ಭದ್ರತೆ: ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮಠದ ಸುತ್ತಲೂ ಸರ್ಪಗಾವಲು ಹಾಕಲಾಗಿತ್ತು. ಅರ್ಧ ಗಂಟೆ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡಲಾಯಿತು.


ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿ ನಮಾಜ್ ಮಾಡಲು ಅವಕಾಶ ನೀಡಿದ ಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್ ಅವರು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.