ADVERTISEMENT

ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ರಕ್ಷಣೆಗೆ ಹೋಗಿ ತಾವೇ ಬಲಿಯಾದರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:34 IST
Last Updated 16 ಡಿಸೆಂಬರ್ 2013, 19:34 IST
ಮಲ್ಪೆ ಕಡಲ ತೀರದ ಸಮುದ್ರದಲ್ಲಿ ಮುಳುಗಿ ಸೋಮವಾರ ಸಾವನ್ನಪ್ಪಿದ ಜೆ.ಗೌತಮ್‌ ಬಾಬು ಮತ್ತು ರೂಪೇಶ್‌ ಕುಮಾರ್‌	 (ಸಂಗ್ರಹ ಚಿತ್ರ)
ಮಲ್ಪೆ ಕಡಲ ತೀರದ ಸಮುದ್ರದಲ್ಲಿ ಮುಳುಗಿ ಸೋಮವಾರ ಸಾವನ್ನಪ್ಪಿದ ಜೆ.ಗೌತಮ್‌ ಬಾಬು ಮತ್ತು ರೂಪೇಶ್‌ ಕುಮಾರ್‌ (ಸಂಗ್ರಹ ಚಿತ್ರ)   

ಉಡುಪಿ: ಮಲ್ಪೆ ಕಡಲ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಳುಗಿದ ವ್ಯಕ್ತಿಯೊಬ್ಬರನ್ನು  ರಕ್ಷಿಸಲು ಯತ್ನಿಸಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ತಾವೂ ಅಲೆಯ ಅಬ್ಬರಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.

ಬೆಂಗಳೂರಿನ ಕತ್ತರಿಗುಪ್ಪೆ ಸಮೀಪದ ಖಾದಿ ಲೇಔಟ್‌ ನಿವಾಸಿಗಳಾದ ವಕೀಲ ಜಗದೀಶ್‌ ಮತ್ತು ಶೋಭಾ ದಂಪತಿಯ ಪುತ್ರ ಜೆ. ಗೌತಮ್‌ ಬಾಬು (22) ಮತ್ತು ದೊಡ್ಡಕಲ್ಲಸಂದ್ರದ ಸುವರ್ಣ­ನಗರದ ಗೋವಿಂದನಾಯ್ಡು ಮತ್ತು ಪದ್ಮಾವತಿ ಅವರ ಮಗ ರೂಪೇಶ್‌ ಕುಮಾರ್‌ (21) ಮತ್ತು ಗುಂಡ್ಲು­ಪೇಟೆಯ ನಾಗರತ್ನಮ್ಮ ಪಿಯುಸಿ ಕಾಲೇಜಿನ ‘ಡಿ’ ದರ್ಜೆ ನೌಕರ ಸೋಮ­ಶೇಖರ್‌ (30) ಮೃತ­ಪಟ್ಟವರು. ಘಟನೆಯಲ್ಲಿ ಗೌತಮ್‌ ಅವರ ಗೆಳೆಯ ದಿಲೀಪ್‌ ಅವರೂ ಗಾಯಗೊಂಡಿ­ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರತ್ನಮ್ಮ ಕಾಲೇಜಿನ ಸುಮಾರು 60 ವಿದ್ಯಾರ್ಥಿಗಳು, ಪ್ರಾಂಶುಪಾಲ, ಬೋಧಕ ಸಿಬ್ಬಂದಿ ಮತ್ತು ಸೋಮ­ಶೇಖರ್‌ ಅವರೊಂದಿಗೆ ಮಲ್ಪೆ ಕಡಲ ತೀರಕ್ಕೆ ಬೆಳಿಗ್ಗೆ ಬಂದಿದ್ದರು. ಬೆಂಗ­ಳೂ­ರಿನ ಕತ್ತರಿಗುಪ್ಪೆಯ ಲಾರ್ಡ್‌ ಶ್ರೀಕೃಷ್ಣ ಎಜುಕೇಶನ್‌ ಸೊಸೈಟಿ ಕಾಲೇಜಿನಲ್ಲಿ (ಕೃಷ್ಣ ಡಿಗ್ರಿ ಕಾಲೇಜ್‌) ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದ ಗೌತಮ್‌, ರೂಪೇಶ್‌, ದಿಲೀಪ್‌ ಮತ್ತು ಅವರ 13 ಮಂದಿ ಸ್ನೇಹಿತರೂ ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದರು.

ಎಲ್ಲರೂ ಒಂದೇ ಸ್ಥಳದಲ್ಲಿ ನೀರಿಗಿ­ಳಿದು ಆಟವಾಡುತ್ತಿದ್ದರು. ಅಲೆಗಳ ಮಧ್ಯೆ ಆಟವಾಡುತ್ತಿದ್ದ  ವಿದ್ಯಾರ್ಥಿ­ಗಳನ್ನು ನೋಡಿಕೊಳ್ಳಲು ಸೋಮ­ಶೇಖರ್‌ ಅವರು ಕಡಲಿಗೆ ಇಳಿದಿದ್ದರು.

ಈ ಸಂದರ್ಭದಲ್ಲಿ ಸೋಮಶೇಖರ್ ಅವರು ಅಲೆಗಳ ಸೆಳೆತಕ್ಕೆ ಸಿಕ್ಕಿ ಮುಳು­ಗಿದರು ಮತ್ತು ಕೈ ಮೇಲಕ್ಕೆತ್ತಿ ಸಹಾಯಕ್ಕಾಗಿ ಕೂಗಿಕೊಂಡರು.

ಇದನ್ನು ನೋಡಿದ ಗೌತಮ್‌, ರೂಪೇಶ್‌ ಮತ್ತು ದಿಲೀಪ್‌ ಅವರು ಸಹಾ­ಯಕ್ಕೆ ಮುಂದಾದಾಗ ಅಲೆಗಳ ಅಬ್ಬರ ಹೆಚ್ಚಾಗಿ ಎಲ್ಲರೂ ನೀರಿನಲ್ಲಿ ಮುಳುಗಿದರು.
ಇದನ್ನು ಗಮನಿಸಿದ ಸ್ಥಳೀಯರು ಮೂರೂ ಮಂದಿ ವಿದ್ಯಾ­ರ್ಥಿ­ಗಳನ್ನು ದಡಕ್ಕೆ ಎಳೆದು ತಂದರು. ಆ ವೇಳೆಗೆ ಇಬ್ಬರು ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ದಿಲೀಪ್‌ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸ­ಲಾಯಿತು.

ಸಮುದ್ರದಲ್ಲಿ ಮುಳುಗಿ ನಾಪತ್ತೆ­ಯಾಗಿದ್ದ ಸೋಮಶೇಖರ್‌ ಅವರ ಮೃತದೇಹ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗೌತಮ್‌ ಮತ್ತು ಸ್ನೇಹಿತರು ಪ್ರವಾ­ಸ­ಕ್ಕೆಂದು ಬಂದಿದ್ದರು. ಭಾನುವಾರ ಬೆಂಗಳೂರಿನಿಂದ ಹೊರಟಿದ್ದ ಅವರು ಅದೇ ದಿನ ಗೋಕರ್ಣಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಲ್ಪೆಗೆ ಬಂದಿದ್ದರು ಎಂದು ಪೊಲೀ­ಸರು ಮಾಹಿತಿ ನೀಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.