ADVERTISEMENT

ಇಬ್ಭಾಗವಾದ ನೆಲದಲ್ಲೇ ಬಿಜೆಪಿ ಒಗ್ಗಟ್ಟಿನ ಮಂತ್ರ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2014, 19:30 IST
Last Updated 13 ಫೆಬ್ರುವರಿ 2014, 19:30 IST
ಹಾವೇರಿಯಲ್ಲಿ ಗುರುವಾರ ನಡೆದ ‘ಭಾರತ ಗೆಲ್ಲಿಸಿ’ ಬಿಜೆಪಿ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ್, ಮಾಜಿ ಸಚಿವ ಸಿ.ಎಂ.ಉದಾಸಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕರಾದ ಬಸವರಾಜ ಬೊಮ್ಮಾಯಿ, ಯು.ಬಿ.ಬಣಕಾರ ಮತ್ತಿತರರು ಚಿತ್ರದಲ್ಲಿದ್ದಾರೆ
ಹಾವೇರಿಯಲ್ಲಿ ಗುರುವಾರ ನಡೆದ ‘ಭಾರತ ಗೆಲ್ಲಿಸಿ’ ಬಿಜೆಪಿ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ್, ಮಾಜಿ ಸಚಿವ ಸಿ.ಎಂ.ಉದಾಸಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕರಾದ ಬಸವರಾಜ ಬೊಮ್ಮಾಯಿ, ಯು.ಬಿ.ಬಣಕಾರ ಮತ್ತಿತರರು ಚಿತ್ರದಲ್ಲಿದ್ದಾರೆ   

ಹಾವೇರಿ:  ವರ್ಷದ ಹಿಂದೆಯಷ್ಟೇ ಒಡೆದು ಇಬ್ಭಾಗವಾಗಿದ್ದ ಹಾವೇರಿ­­ಯ­ಲ್ಲಿಯೇ ಗುರುವಾರ ಬಿಜೆಪಿ ಮುಖಂಡ­ರು ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಿದರು.

‘ನಮ್ಮ ಒಡಕಿನಿಂದ ಪಕ್ಷ ಇಬ್ಭಾಗ­ವಾ­ಯಿತು. ಆ ತಪ್ಪಿಗೆ ನಮ್ಮನ್ನು ಅಧಿ­ಕಾರ­ದಿಂದ ದೂರ ಇಟ್ಟು ಸರಿಯಾದ ಶಿಕ್ಷೆ ಕೊಟ್ಟಿದ್ದೀರಿ. ನೀವು ಕೊಟ್ಟ ಶಿಕ್ಷೆ ಶಿಕ್ಷೆ­ಯಲ್ಲ. ನಮಗೆ ತಿದ್ದಿಕೊಳ್ಳಲು ನೀಡಿದ ಅವಕಾಶ ಎಂದು ತಿಳಿದು­ಕೊಳ್ಳುತ್ತೇವೆ’ ಎಂದು ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಆಯೋಜಿ­ಸಿದ ‘ಭಾರತ ಗೆಲ್ಲಿಸಿ’ ಜಿಲ್ಲಾ ಮಟ್ಟದ ಸಮಾವೇಶ­ದಲ್ಲಿ ಮಾತನಾಡಿದ  ಬಿಜೆಪಿ ಮುಖಂಡರು ಹೇಳಿದರು.

‘ನಾವು ಮಾಡಿದ ತಪ್ಪಿಗೆ ಈಗ ಪಶ್ಚಾತ್ತಾಪವಾಗಿದೆ. ಅದಕ್ಕಾಗಿ ಕಾರ್ಯ­ಕರ್ತರ ಹಾಗೂ ರಾಜ್ಯದ ಜನರ ಕ್ಷಮೆ ಕೇಳುತ್ತೇವೆ. ಮುಂಬರುವ ದಿನಗಳಲ್ಲಿ ನಾವು ಒಗ್ಗಟ್ಟಾಗಿ ಮುಂದುವರಿಯುವ ಪ್ರಮಾಣ ಮಾಡುತ್ತೇವೆ’ ಎಂದು ಮಾಜಿ ಮುಖ್ಯ­ಮಂತ್ರಿಗಳಾದ ಬಿ.ಎಸ್‌.­ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ಬಹುತೇಕ ನಾಯಕರು ಹೇಳಿದರು.

ಅವನತಿ ಆರಂಭ: ‘ಇದೇ ಹಾವೇರಿಯಲ್ಲಿ ಪಕ್ಷ ಒಡೆದು ಎರಡು ಹೋಳಾಗಿ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಕಾರಣವಾಯಿತು. ಅದೇ ಹಾವೇರಿ­ಯಲ್ಲಿ ಹಿಂದಿನ ತಪ್ಪನ್ನು ತಿದ್ದಿಕೊಂಡು ನಾವೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್‌ ಅವನತಿಗೆ ನಾಂದಿ ಹಾಡಲಿದ್ದೇವೆ’ ಎಂದು ಯಡಿಯೂರಪ್ಪ ಹೇಳಿದರು.

‘ಕೇಂದ್ರದಲ್ಲಿ ಸರ್ಕಾರ ಬದುಕಿದೆ ಎನಿಸುತ್ತಿಲ್ಲ. ಯುದ್ಧದ ನೇತೃತ್ವ ವಹಿಸಿದ್ದ ಸೇನಾಧಿಪತಿ ಯುದ್ಧಭೂಮಿಯಿಂದ ಓಡಿ ಹೋದ ಸ್ಥಿತಿಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರಿದ್ದಾರೆ. ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿ­ಯಾದ ಮೇಲೆ ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗು­ತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.