ADVERTISEMENT

ಇರುವ ಮಾರ್ಗಗಳ ಬಿಟ್ಟು ಹೊಸದರತ್ತ ಚಿತ್ತ!

ಚರ್ಚೆಗೆ ಗ್ರಾಸ ಒದಗಿಸಿರುವ ಶಿಶಿಲಾ– ಭೈರಾಪುರ ರಸ್ತೆ ನಿರ್ಮಾಣ ಯೋಜನೆ: ಅಚ್ಚರಿಗೆ ಕಾರಣವಾದ ಇಲಾಖೆ ನಿರ್ಧಾರ

ಕೆ.ಆರ್.ಸುಬ್ರಹ್ಮಣ್ಯ
Published 17 ಡಿಸೆಂಬರ್ 2016, 19:30 IST
Last Updated 17 ಡಿಸೆಂಬರ್ 2016, 19:30 IST
ಇರುವ ಮಾರ್ಗಗಳ ಬಿಟ್ಟು ಹೊಸದರತ್ತ ಚಿತ್ತ!
ಇರುವ ಮಾರ್ಗಗಳ ಬಿಟ್ಟು ಹೊಸದರತ್ತ ಚಿತ್ತ!   
ಮಂಗಳೂರು: ಕರಾವಳಿ ಜಿಲ್ಲೆಗಳ ಜೊತೆ ಘಟ್ಟ ಪ್ರದೇಶವನ್ನು ಬೆಸೆಯುವುದಕ್ಕಾಗಿ ನಿರ್ಮಿಸಲಾದ ಹಲವು ರಸ್ತೆಗಳು ಅರಣ್ಯ ಇಲಾಖೆಯ ತಕರಾರುಗಳ ಕಾರಣದಿಂದ ಸುಧಾರಣೆ ಮತ್ತು ನಿರ್ವಹಣೆಯಿಂದ ದೂರ ಉಳಿಯುವಂತಾಗಿದೆ. ಈ ಮಧ್ಯೆ ಕರಾವಳಿ– ಘಟ್ಟ ಪ್ರದೇಶವನ್ನು ಸಂಪರ್ಕಿಸಲು ಅರಣ್ಯದೊಳಗೆ ಮತ್ತೊಂದು ರಸ್ತೆಯನ್ನು ನಿರ್ಮಿಸಲು ಹೊರಟಿರುವ ಲೋಕೋಪಯೋಗಿ ಇಲಾಖೆಯ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
 
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಘಟ್ಟ ಪ್ರದೇಶವನ್ನು ಸಂಪರ್ಕಿಸುವುದಕ್ಕಾಗಿ ಹಲವು ಮಾರ್ಗಗಳು ಈಗ ಬಳಕೆಯಲ್ಲಿವೆ. ಅವುಗಳಲ್ಲಿ ಬಹುತೇಕ ರಸ್ತೆಗಳು ಅರಣ್ಯದೊಳಗೆ ಹಾದು ಹೋಗಿದ್ದು, ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ವಿಸ್ತರಣೆ, ಸುಧಾರಣೆ, ನಿರ್ವಹಣೆ ಮಾಡಲಾಗದ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ದಿನೇ ದಿನೇ ಈ ರಸ್ತೆಗಳ ಸ್ಥಿತಿ ಹದಗೆಡುತ್ತಲೇ ಇದೆ. ಅರಣ್ಯ ಇಲಾಖೆಯ ಮನವೊಲಿಸಿ ಇದ್ದ ರಸ್ತೆಗಳ ಸುಧಾರಣೆಯತ್ತ ಗಮನಕೊಡದೇ ಮತ್ತೊಂದು ರಸ್ತೆ ನಿರ್ಮಿಸುವ ದುಸ್ಸಾಹಸಕ್ಕೆ ಲೋಕೋಪಯೋಗಿ ಇಲಾಖೆ ಕೈಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
 
ಕರಾವಳಿ ಜಿಲ್ಲೆಗಳು ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವಿನ ಪ್ರಯಾಣದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಶಿಶಿಲಾ– ಭೈರಾಪುರ ಮಾರ್ಗದಲ್ಲಿ ಹೊಸ ರಸ್ತೆ ನಿರ್ಮಿಸುವ ಪ್ರಸ್ತಾವವನ್ನು ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು ರೂಪಿಸಿದ್ದಾರೆ. ಈ ಯೋಜನೆ ಕಾರ್ಯಸಾಧುವೇ ಎಂಬ ಅನುಮಾನ ಲೋಕೋಪಯೋಗಿ ಇಲಾಖೆಯ ಮಂಗಳೂರು ವೃತ್ತದೊಳಗಿನ ಅಧಿಕಾರಿಗಳಿಂದಲೇ ವ್ಯಕ್ತವಾಗುತ್ತಿದೆ. ಇರುವ ರಸ್ತೆಗಳ ನಿರ್ವಹಣೆ, ಸುಧಾರಣೆಗೆ ಅವಕಾಶ ಕೊಡದ ಅರಣ್ಯ ಇಲಾಖೆ ದಟ್ಟ ಅರಣ್ಯದೊಳಗೆ ಹೊಸ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಟ್ಟೀತೆ? ಎಂಬ ಪ್ರಶ್ನೆಯನ್ನೂ ಅವರು ಮುಂದಿಡುತ್ತಾರೆ.
 
ಇರುವ ರಸ್ತೆಗಳ ಸ್ಥಿತಿ ಅಯೋಮಯ: ಮಂಗಳೂರು– ಬೆಂಗಳೂರು ನಡುವಿನ ಸಂಚಾರಕ್ಕೆ  ಮೂರು ಮಾರ್ಗಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ಶಿರಾಡಿ ಘಾಟಿ ಮಾರ್ಗ ಅತ್ಯಧಿಕ ಸಂಖ್ಯೆಯ ಜನರು ಬಳಸುವ ಮಾರ್ಗವಾಗಿದೆ. ಚಾರ್ಮಾಡಿ ಘಾಟಿ ರಸ್ತೆಯೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ. ಕೆಲವರು ಸಂಪಾಜೆ ಮಾರ್ಗವಾಗಿ ಮಡಿಕೇರಿ ತಲುಪಿ ಅಲ್ಲಿಂದ ಮೈಸೂರು ಇಲ್ಲವೇ ಬೆಂಗಳೂರಿನತ್ತ ತೆರಳುತ್ತಾರೆ. ಈ ಮೂರೂ ಮಾರ್ಗಗಳಲ್ಲಿ ಎಲ್‌ಪಿಜಿ ಅನಿಲ ಟ್ಯಾಂಕರ್‌ಗಳು, ಪೆಟ್ರೋಲ್‌, ಡೀಸೆಲ್‌ ಸಾಗಣೆ ಟ್ಯಾಂಕರ್‌ಗಳು ಸೇರಿದಂತೆ ಘನ ವಾಹನಗಳು ಅತ್ಯಧಿಕ ಸಂಖ್ಯೆಯಲ್ಲಿ ಸಂಚರಿಸುತ್ತವೆ.
 
ಶಿರಾಡಿ ಘಾಟಿ ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟೀಕರಣ ಮಾಡುವ ಕಾಮಗಾರಿಯ ಮೊದಲ ಹಂತ ಮುಗಿದಿದೆ. ಆದರೆ, ಎರಡನೇ ಹಂತದ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಅರ್ಧದಷ್ಟು ರಸ್ತೆ ನಿರ್ವಹಣೆಯೇ ಇಲ್ಲದೆ ಗುಂಡಿಗಳ ನಡುವೆಯೇ ವಾಹನಗಳು ಸಾಗಬೇಕಾದ ಸ್ಥಿತಿ ಇದೆ. ಸಂಪಾಜೆ– ಮಡಿಕೇರಿ ಮಾರ್ಗದ ವಿಸ್ತರಣೆ ಬಾಕಿ ಇದ್ದು, ಭೂಸ್ವಾಧೀನದ ತೊಡಕಿನಿಂದಾಗಿ ವಿಳಂಬವಾಗುತ್ತಿದೆ. ಚಾರ್ಮಾಡಿ ಘಾಟಿ ರಸ್ತೆ ಅತ್ಯಂತ ಇಕ್ಕಟ್ಟಿನಿಂದ ಕೂಡಿದ್ದು, ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ.
 
‘ಇತ್ತೀಚಿನ ಕೆಲವು ವರ್ಷಗಳಿಂದ ಬಿಸಿಲೆ ಘಾಟಿ ರಸ್ತೆ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಇದು ಅತ್ಯಂತ ಕಡಿದಾದ ತಿರುವುಗಳಿಂದ ಕೂಡಿರುವ ರಸ್ತೆ. ಈ ಕಾರಣದಿಂದ ದೊಡ್ಡ ವಾಹನಗಳು ಈ ಮಾರ್ಗ ಬಳಕೆ ಮಾಡುವುದು ಕಷ್ಟ. ಈ ಮಾರ್ಗದ ವಿಸ್ತರಣೆಗೂ ಅರಣ್ಯ ಇಲಾಖೆ ಒಪ್ಪುತ್ತಿಲ್ಲ. ಇರುವ ಕಿರಿದಾದ ರಸ್ತೆಯ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುತ್ತವೆ ಲೋಕೋಪಯೋಗಿ ಇಲಾಖೆಯ ಮೂಲಗಳು.
 
ಶಿರಾಡಿ, ಚಾರ್ಮಾಡಿ, ಸಂಪಾಜೆ ಮಾರ್ಗಗಳು ಬಂದ್‌ ಆದಾಗ ಬೃಹತ್‌ ವಾಹನಗಳ ಸಂಚಾರಕ್ಕೆ ಹುಲಿಕಲ್‌ ಘಾಟಿ, ಮಾಳ ಘಾಟಿಯನ್ನು ಹೆಚ್ಚಾಗಿ ಆಶ್ರಯಿಸಲಾಗುತ್ತದೆ. ಕೆಲವರು ಹೊನ್ನಾವರ ಮಾರ್ಗವನ್ನೂ ಬಳಸುತ್ತಾರೆ. ಅನಿವಾರ್ಯ ಸಂದರ್ಭದಲ್ಲಿ ಲಘು ವಾಹನಗಳ ಸಂಚಾರಕ್ಕೆ ಆಗುಂಬೆ ಘಾಟಿ ರಸ್ತೆ ಬಳಕೆ ಆಗುತ್ತಿದೆ. ಅರಣ್ಯ ಇಲಾಖೆಯ ತಕರಾರಿನ ಕಾರಣದಿಂದ ಮಾಳ ಘಾಟಿ ರಸ್ತೆಯೂ ನಿರ್ವಹಣೆ, ಸುಧಾರಣೆ ಕಾಣದೆ ದುಸ್ಥಿತಿಗೆ ತಲುಪುತ್ತಿದೆ.
 
ಸಾಧ್ಯತೆಯ ಬಗ್ಗೆಯೇ ಅನುಮಾನ: ‘ಕರಾವಳಿ– ಘಟ್ಟ ಪ್ರದೇಶದ ನಡುವಿನ ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆಗಳ ಅಭಿವೃದ್ಧಿ, ಸುಧಾರಣೆಗೆ ಅರಣ್ಯ ಇಲಾಖೆಯ ತಕರಾರುಗಳೇ ಅಡ್ಡಿಯಾ ಗುತ್ತಿವೆ. ಈ ಕಾರಣದಿಂದಾಗಿಯೇ ಹಲವು ರಸ್ತೆಗಳ ಅಭಿವೃದ್ಧಿಗೆ ಮಂಜೂ ರಾದ ಅನುದಾನ ಬಳಕೆಯಾಗದೇ ವಾಪಸು ಹೋಗಿರುವ ಉದಾಹರ ಣೆಗಳಿವೆ. ಇಂತಹ ಸ್ಥಿತಿಯಲ್ಲಿ ದಟ್ಟ ಅರಣ್ಯದೊಳಗೆ ರಸ್ತೆ ನಿರ್ಮಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸಿಗುವುದು ಅನುಮಾನ. ಅಷ್ಟಲ್ಲದೆ ಇರುವ ರಸ್ತೆಗಳ ಸುಧಾರಣೆಯನ್ನು ಬಿಟ್ಟು, ಹೊಸ ರಸ್ತೆ ನಿರ್ಮಿಸಿದರೆ ಅದು ಸಂಪೂರ್ಣ ಬಳಕೆಗೆ ಯೋಗ್ಯವಾಗಲು ಹಲವು ವರ್ಷಗಳೇ ಬೇಕಾಗಬಹುದು’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
 
**
ಇನ್ನೊಂದು ಹೊಸ ರಸ್ತೆಯ ಪ್ರಸ್ತಾವ
ಶಿಶಿಲಾ– ಭೈರಾಪುರ ರಸ್ತೆಯ ಜೊತೆಯಲ್ಲೇ ಮಂಗಳೂರಿನಿಂದ ಚಿಕ್ಕಮಗಳೂರಿನತ್ತ ಸಂಪರ್ಕಕ್ಕಾಗಿ ದಟ್ಟ ಅರಣ್ಯದೊಳಗೆ ಮತ್ತೊಂದು ಹೊಸ ರಸ್ತೆ ನಿರ್ಮಿಸುವ ಪ್ರಸ್ತಾವ ಲೋಕೋಪಯೋಗಿ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಮಾರ್ಗವಾಗಿ ಕುದುರೆಮುಖ ಸಮೀಪದ ಸಂಶೆಗೆ ಹೊಸ ರಸ್ತೆಯನ್ನು ನಿರ್ಮಿಸುವ ಪ್ರಸ್ತಾವ ಇಲಾಖೆಯ ಮುಂದಿದೆ. ಈ ಮಾರ್ಗದ ಬಹುಭಾಗ ಕುದುರೆ ಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಅರಣ್ಯದೊಳಗೆ ಹಾದುಹೋಗಲಿದೆ. ಅದಕ್ಕೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆ ದೊರೆಯುವುದು ಅನುಮಾನ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
 
**
ಮಂಗಳೂರನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳು
* ಮಂಗಳೂರು– ಶಿರಾಡಿ ಘಾಟಿ– ಸಕಲೇಶಪುರ– ಹಾಸನ– ಬೆಂಗಳೂರು– 348 ಕಿ.ಮೀ.
* ಮಂಗಳೂರು– ಚಾರ್ಮಾಡಿ ಘಾಟಿ– ಮೂಡಿಗೆರೆ– ಬೇಲೂರು– ಹಾಸನ– ಬೆಂಗಳೂರು– 368 ಕಿ.ಮೀ.
* ಮಂಗಳೂರು– ಸಂಪಾಜೆ– ಮಡಿಕೇರಿ– ಮೈಸೂರು– ಬೆಂಗಳೂರು– 411 ಕಿ.ಮೀ.
* ಮಂಗಳೂರು– ಸಂಪಾಜೆ– ಮಡಿಕೇರಿ– ಹುಣಸೂರು– ಕೆ.ಆರ್‌.ನಗರ– ಹೊಳೆನರಸೀಪುರ– ಹಾಸನ– ಬೆಂಗಳೂರು– 390 ಕಿ.ಮೀ.
* ಮಂಗಳೂರು– ಕುಕ್ಕೆ ಸುಬ್ರಹ್ಮಣ್ಯ– ಬಿಸಿಲೆ ಘಾಟಿ– ಸಕಲೇಶಪುರ– ಬೆಂಗಳೂರು– 371 ಕಿ.ಮೀ.
 
**
ಇತರೆ ಮಾರ್ಗಗಳು
* ಮಂಗಳೂರು– ಉಡುಪಿ– ಹುಲಿಕಲ್ (ಬಾಳೆಬರೆ) ಘಾಟಿ– ಶಿವಮೊಗ್ಗ– ಬೆಂಗಳೂರು– 542 ಕಿ.ಮೀ.
* ಮಂಗಳೂರು– ಉಡುಪಿ– ಆಗುಂಬೆ– ಶಿವಮೊಗ್ಗ– ಬೆಂಗಳೂರು– 424 ಕಿ.ಮೀ.
* ಮಂಗಳೂರು– ಮೂಡುಬಿದಿರೆ– ಕಾರ್ಕಳ– ಮಾಳ ಘಾಟಿ– ಕುದುರೆಮುಖ– ಕಳಸ– ಮೂಡಿಗೆರೆ– ಹಾಸನ– ಬೆಂಗಳೂರು– 420 ಕಿ.ಮೀ.
* ಮಂಗಳೂರು– ಹೊನ್ನಾವರ– ಬೆಂಗಳೂರು– 643 ಕಿ.ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.