ಕುಣಿಗಲ್: ಕುಣಿಗಲ್ ಸ್ಟಡ್ ಫಾರಂನಲ್ಲಿ ಪಿತೃ ಸ್ಥಾನದಲ್ಲಿದ್ದ ಐರ್ಲೆಂಡ್ ತಳಿಯ ‘ಬರ್ಡನ್ ಆಫ್ ಪ್ರೂಫ್’ (24) ಕುದುರೆ ಮಂಗಳವಾರ ಬೆಳಿಗ್ಗೆ ಮೃತ ಪಟ್ಟಿತು.
ತಪಾಸಣೆ ನಡೆಸಿದ ವೈದ್ಯರು ಕುದುರೆ, ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಖಚಿತಪಡಿಸಿದರು.
ಚಾಂಪಿಯನ್ ಫೈರ್ ಎಂದೇ ಹೆಸರುವಾಸಿಯಾಗಿದ್ದ ಈ ಕುದುರೆ ಸ್ಟಡ್ ಫಾರಂ ಸೇರಿದಂತೆ ಇಡೀ ದೇಶದಲ್ಲೇ ಖ್ಯಾತಿ ಗಳಿಸಿತ್ತು. ಕುಟುಂಬದ ಸದಸ್ಯರೊಬ್ಬರು ಮೃತಪಟ್ಟಂತೆ ಫಾರಂ ಕಾರ್ಮಿಕರೆಲ್ಲ ಕಣ್ಣೀರಿಟ್ಟರು. ಈ ಕಣ್ಣೀರಿನ ನಡುವೆಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವ್ಯವಸ್ಥಾಪಕ ಡಾ.ದಿನೇಶ್ ಮಾತನಾಡಿ, ‘ಇತಿಹಾಸ ಪ್ರಸಿದ್ದವಾದ ಕುಣಿಗಲ್ ಸ್ಟಡ್ ಫಾರಂ ದೇಶ ವಿದೇಶಗಳ ತಳಿ ಅಭಿವೃದ್ದಿಗೆ ಮಹತ್ವದ ಸ್ಥಾನ ಪಡೆದಿದೆ. ಚಾಂಪಿಯನ್ ಫೈರ್ ಸಾವಿನಿಂದ ಅಶ್ವ ಪ್ರೇಮಿಗಳಿಗೆ ತೀವ್ರ ದುಃಖ ಆಗಿದೆ. ಸಂಸ್ಥೆಗೂ ತುಂಬಾ ನಷ್ಟ ಉಂಟಾಗಿದೆ’ ಎಂದರು.
ಕುದುರೆಯ ವೈಶಿಷ್ಟ್ಯ: ದೇಶೀಯ ಮತ್ತು ವಿದೇಶಿ ಕುದುರೆಗಳ ತಳಿ ಅಭಿವೃದ್ದಿ ಬೆಳವಣಿಗೆಗೆ ಮತ್ತು ವಂಶಾಭಿವೃದ್ದಿಗೆ ಕುಣಿಗಲ್ ಸ್ಟಡ್ ಫಾರಂನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಐರ್ಲೆಂಡ್ ತಳಿಯ ಈ ಕುದುರೆ 1992ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದ್ದು, 2000ದಲ್ಲಿ ಕುಣಿಗಲ್‌ಗೆ ಕರೆತರಲಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಸಂತಾನೋತ್ಪತ್ತಿಗೆ ಬಳಸಿಕೊಂಡಿದ್ದು ಇದುವರೆಗೂ 450ಕ್ಕೂ ಹೆಚ್ಚು ಮರಿಗಳ ಜನನಕ್ಕೆ ಕಾರಣವಾಗಿದೆ.
‘ಭಾರತ ಹಾಗೂ ವಿದೇಶದಲ್ಲಿ ನಡೆಯುವ ರೇಸ್‌ನಲ್ಲಿ ಈ ತಳಿಯಿಂದ ಹೊರ ಬಂದ ಕುದುರೆಗಳು 1150 ರೇಸ್‌ಗಳಲ್ಲಿ ಗೆಲುವು ಸಾಧಿಸಿವೆ. 12 ಡರ್ಬಿ ವಿನ್ನರ್, 40 ಕ್ಲಾಸಿಕಲ್ ರೇಸ್‌ಗಳಲ್ಲಿ ಗೆಲುವು ಸಾಧಿಸಿ ಮಾಲೀಕರಿಗೆ ₹ 70 ಕೋಟಿಗೂ ಹೆಚ್ಚು ಆದಾಯವನ್ನು ನೀಡಿವೆ’ ಎಂದು ಸ್ಟಡ್ ಫಾರಂ ಅಧಿಕಾರಿಗಳು ಮಾಹಿತಿ ನೀಡಿದರು.
ಸ್ಟಡ್ ಫಾರಂ ಗುತ್ತಿಗೆ ಪಡೆದು ನಿರ್ವಹಿಸುತ್ತಿರುವ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್(ಯುಆರ್‌ಬಿಬಿ) ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಜೈನಾ ಮಿರ್ಜಾ ಅವರು ಮಂಗಳವಾರ ಸಂಜೆ ಫಾರಂಗೆ ಭೇಟಿ ನೀಡಿ ದುಃಖ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.