ADVERTISEMENT

ಈಶ್ವರಪ್ಪ, ಕಾಂತೇಶ್‌ಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:48 IST
Last Updated 16 ಏಪ್ರಿಲ್ 2018, 19:48 IST
ಈಶ್ವರಪ್ಪ, ಕಾಂತೇಶ್‌ಗೆ ಹೈಕೋರ್ಟ್‌ ನೋಟಿಸ್‌
ಈಶ್ವರಪ್ಪ, ಕಾಂತೇಶ್‌ಗೆ ಹೈಕೋರ್ಟ್‌ ನೋಟಿಸ್‌   

ಬೆಂಗಳೂರು: ಅಕ್ರಮ‌ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಕೆ.ಇ‌.ಕಾಂತೇಶ್ ಹಾಗೂ ಕಾಂತೇಶ್‌ ಪತ್ನಿ ಶಾಲಿನಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಶಿವಮೊಗ್ಗದ ವಕೀಲ ವಿನೋದ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಏನಿದು ಪ್ರಕರಣ?: ‘ಈಶ್ವರಪ್ಪ, 2006ರಿಂದ 2010ರವರೆಗೆ ಗಳಿಸಿರುವ ಕೋಟ್ಯಂತರ ಮೌಲ್ಯದ ಅಕ್ರಮ ಸ್ಥಿರ ಮತ್ತು ಚರಾಸ್ತಿ ಗಳಿಕೆ ಸಂಬಂಧ ತನಿಖೆ ನಡೆಸಬೇಕು’ ಎಂದು ಕೋರಿ ವಿನೋದ್ 2013ರಲ್ಲಿ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ADVERTISEMENT

ತನಿಖೆ ಶೇ 70ರಷ್ಟು ಪೂರ್ಣಗೊಂಡ ಸಂದರ್ಭದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಈಶ್ವರಪ್ಪ, ‘ನಾನೊಬ್ಬ ಸಾರ್ವಜನಿಕ ಸೇವಕ. ನನ್ನ ವಿರುದ್ಧ ದೂರು ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆಯದೇ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ದೂರು ವಜಾಗೊಳಿಸಬೇಕು’ ಎಂದು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿನೋದ್ ದೂರನ್ನು ವಜಾಗೊಳಿಸಿತ್ತು.

ಇದನ್ನು ವಿನೋದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆಗ ಹೈಕೋರ್ಟ್ ಮರು ತನಿಖೆಗೆ ಆದೇಶಿಸಿತ್ತು. ಈ ಮರು ತನಿಖೆ ಆದೇಶವನ್ನು ಮತ್ತೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಈಶ್ವರಪ್ಪ, ‘ಲೋಕಾಯುಕ್ತ ನ್ಯಾಯಾಲಯ ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡಿಲ್ಲ’ ಎಂದು ಆಕ್ಷೇಪಿಸಿದ್ದರು.

ಇದಕ್ಕೆ ಹೈಕೋರ್ಟ್‌, ‘ದೂರುದಾರರ ವೈಯುಕ್ತಿಕ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ನಡೆಸಿ’ ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯ ವಿನೋದ್ ದೂರನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇದೀಗ ನ್ಯಾಯಾಲಯ ಲೋಕಾಯುಕ್ತ ನ್ಯಾಯಾಲಯದ ದಾಖಲೆಗಳನ್ನೂ ಹಾಜರುಪಡಿಸುವಂತೆ ನಿರ್ದೇಶಿಸಿದೆ.

ಅರ್ಜಿದಾರ ವಿನೋದ್ ಪರ ಎಂ.ಎಸ್‌.ಶ್ಯಾಮಸುಂದರ್‌ ಹಾಜರಾಗಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.