ADVERTISEMENT

ಉರುಳಿದ ಮರ : ಅಪಾರ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 15:50 IST
Last Updated 24 ಫೆಬ್ರುವರಿ 2011, 15:50 IST
ಉರುಳಿದ ಮರ : ಅಪಾರ ಬೆಳೆ ನಷ್ಟ
ಉರುಳಿದ ಮರ : ಅಪಾರ ಬೆಳೆ ನಷ್ಟ   

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ ನಂತರ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಮೂಡಿಗೆರೆ ಪಟ್ಟಣ ಮತು ಸುತ್ತಲ ಪ್ರದೇಶದಲ್ಲಿ ಗರಿಷ್ಠ 192 ಮಿ.ಮೀ. ಮಳೆಯಾಗಿದ್ದು, ಕಾಫಿ, ಏಲಕ್ಕಿ, ಕಾಳು ಮೆಣಸು ಬೆಳೆಗಾರರಿಗೆ ಭಾರಿ ನಷ್ಟವೇ ಆಗಿದೆ.

ನಗರ ಸುತ್ತಲ ಪ್ರದೇಶ, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಯಲ್ಲಿ ಮಳೆಯಾಗಿದೆ. ಕೆಲವೆಡೆ ಮಳೆ ಬಿರುಸಾಗಿಯೇ ಇದ್ದಿತು.
ಕಳೆದ ವರ್ಷ ಅಷ್ಟು ಫಸಲು ಕಚ್ಚದ ಮಾವಿನ ಮರಗಳು ಈ ಬಾರಿ ಮೈತುಂಬಾ ಹೂ ಹೊದ್ದಿದ್ದರೂ ಅಕಾಲಿಕ ಮಳೆ ಎಲ್ಲವನ್ನೂ ಹಾಳುಗೆಡವಿದೆ. ಪರಿಣಾಮ ಬಂಪರ್ ಫಸಲು ನಿರೀಕ್ಷೆಯಲ್ಲಿದ್ದ ತಮಗೆ ಅಪಾರ ನಷ್ಟವಾಗಲಿದೆ ಎಂದು ಮಾವು ಬೆಳೆಗಾರರು ಅಕಾಲಿಕ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅರೇಬಿಕಾ ಕಾಫಿ ಕೊಯ್ಲು ಕೆಲವೆಡೆ ಪೂರ್ಣಗೊಂಡಿಲ್ಲ. ಮಳೆ ಮುಂದುವರಿದರೆ ಕಾಫಿ ಒಣಗಿಸುವುದೂ ಕಷ್ಟವಾಗಲಿದ್ದು, ಕಾಳು ಮೆಣಸು ನೆಲಕ್ಕುದುರಿದರೆ ಅಪಾರ ನಷ್ಟವುಂಟಾಗಲಿದೆ. ರೈತರು ಜಮೀನಿನಲ್ಲಿ ಬೀಜದ ಶುಂಠಿ ಹಾಗೆಯೇ ಉಳಿಸಿರುವುದರಿಂದ ಮಳೆ ಬಿದ್ದರೆ ಮೊಳಕೆಯೊಡೆದು ಬೆಳೆ ಕೈಗೆ ಸಿಗದಂತಾಗಲಿದೆ.

ಮೂಡಿಗೆರೆ ವರದಿ: ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುತ್ತಿದೆ. ಗುರುವಾರ ಭಾರಿ ಮಳೆಯಿಂದಾಗಿ ರೋಬಸ್ಟಾ ಕಾಫಿ, ಕಾಳು ಮೆಣಸು ಹಾಗೂ ಏಲಕ್ಕಿ ಬೆಳೆಗೆ ಭಾರಿ ಹಾನಿಯಾಗಿದೆ. ಕೆಲವು ಕಾಫಿ ಬೆಳೆಗಾರರು ಕಣದಲ್ಲಿ ಒಣಗಲು ಹಾಕಿದ್ದ ಕಾಫಿ, ಮೆಣಸು ನೆನೆದಿದ್ದರಿಂದ ಸಾಕಷ್ಟು ನಷ್ಟ ಉಂಟಾಗಿದೆ. ಕೆಲವು ಅಂಶ ಫಸಲು ಕೊಚ್ಚಿಹೋಗಿದೆ.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಮರ ಬಿದ್ದ ಪರಿಣಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ರವೀಂದ್ರ ರಾಜ್ ಹಾಗೂ ಬಿಳಗುಳ ರವಿ ಅವರ ಕಾರುಗಳು ಜಖಂಗೊಂಡಿವೆ.

ಬುಧವಾರ ತಾಲ್ಲೂಕಿನ ಕೆಲವೆಡೆ ಮಾತ್ರ ಮಳೆಯಾಗಿತ್ತು. ಗುರುವಾರ ತಾಲ್ಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆ ಬಿದ್ದಿರುವುದು ಕೃಷಿಕರಲ್ಲಿ ಆತಂಕ ಉಂಟಾಗಿದೆ.

ಬಾಳೆಹೊನ್ನೂರು ಸಮೀಪದ ಬನ್ನೂರು, ಜಕ್ಕಣಕಿ, ಕಡಬಗೆರೆ, ಸಂಗಮೇಶ್ವರ ಪೇಟೆಯಲ್ಲಿ ಗುರುವಾರ ಸಂಜೆ 1 ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ. ಒಟ್ಟು ಒಂದು ಇಂಚಿನಷ್ಟು ಮಳೆಯಾಗಿದೆ. ಉತ್ತಮ ಮಳೆಯಿಂದಾಗಿ ಕಾಫಿ ಹೂವು ಅರಳಲಾರಂಭಿಸಿವೆ ಎಂದು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಳಸ ಹಾಗೂ ನರಸಿಂಹರಾಜಪುರ ಮತ್ತು ಸುತ್ತಲ ಪ್ರದೇಶದಲ್ಲಿಯೂ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.