ADVERTISEMENT

ಎಚ್‌ಡಿಕೆ ದಂಪತಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 6:05 IST
Last Updated 26 ಸೆಪ್ಟೆಂಬರ್ 2011, 6:05 IST

ಬೆಂಗಳೂರು: ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ  ವಕೀಲ ವಿನೋದ್ ಕುಮಾರ್  ತಮ್ಮ ವಿರುದ್ದ ಸಲ್ಲಿಸಿರುವ ಖಾಸಗಿ ದೂರಿನ ಅರ್ಜಿ ರದ್ದು ಪಡಿಸಬೇಕೆಂದು ಕೋರಿ ಎಚ್‌ಡಿಕೆ ದಂಪತಿ  ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ ಅವರ ಏಕಸದಸ್ಯ ಪೀಠವು ಸೋಮವಾರ ಅಕ್ಟೋಬರ್ 17ಕ್ಕೆ ಮುಂದೂಡಿತು. 

ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣಕ್ಕೆ ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿದ ಆರೋಪದ ಮೇಲೆ ವಕೀಲ ವಿನೋದ್ ಕುಮಾರ್ ಅವರು ಎಚ್‌ಡಿಕೆ ದಂಪತಿ ವಿರುದ್ಧ  ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಚ್‌ಡಿಕೆ ದಂಪತಿಗೆ ಸಮನ್ಸ್ ಜಾರಿ ಮಾಡಿತ್ತು.

ಆಗಸ್ಟ್ 30 ಮತ್ತು ಸೆಪ್ಟೆಂಬರ್ 5ರಂದು ಕುಮಾರಸ್ವಾಮಿ ದಂಪತಿ ಅನಾರೋಗ್ಯದ ಕಾರಣ ನೀಡಿ ಖುದ್ದು ಹಾಜರಿಯಿಂದ ವಿನಾಯಿತಿ ಪಡೆದಿದ್ದರು. ಸೆ. 7ರಂದು ಹೈಕೋರ್ಟ್ ಒಂದು ದಿನದ ಮಟ್ಟಿಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿತ್ತು.

ಪ್ರಕರಣದ ಸಂಬಂಧ ಸೆ.8 ರಂದು  ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸೆ.9 ರಂದು ಮೊದಲ ಬಾರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ದಂಪತಿ ವೈಯಕ್ತಿಕ ಬಾಂಡ್ ಮತ್ತು ಭದ್ರತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.