ADVERTISEMENT

ಎಚ್‌ಡಿಕೆ ದಂಪತಿ ನಿಟ್ಟುಸಿರು: ವಕೀಲ ವಿನೋದ್ ಕುಮಾರ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 8:40 IST
Last Updated 21 ಅಕ್ಟೋಬರ್ 2011, 8:40 IST

ಬೆಂಗಳೂರು: ಲೋಕಾಯುಕ್ತ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿದ ಅರ್ಜಿಯನ್ನು ಶುಕ್ರವಾರ ಮಾನ್ಯ ಮಾಡಿರುವ ಹೈಕೋರ್ಟ್, ದೂರುದಾರ ವಕೀಲ ವಿನೋದ್ ಕುಮಾರ್ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ದಂಪತಿ ವಿರುದ್ದ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತೆರೆ ಬಿದ್ದಿದೆ.

ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರಿದ್ದ ಏಕಸದಸ್ಯ ಪೀಠವು ಎಚ್‌ಡಿಕೆ ದಂಪತಿ ಮನವಿಯನ್ನು ಮಾನ್ಯ ಮಾಡಿ ವಕೀಲ ವಿನೋದ್ ಕುಮಾರ್ ಅವರಿಗೆ ದಂಡ ವಿಧಿಸಿತು.

ಹೈಕೋರ್ಟ್ ತೀರ್ಪಿನಲ್ಲಿರುವ ಅಂಶಗಳು:

* ದೂರು ರಾಜಕೀಯ ಪ್ರೇರಿತವಾಗಿದ್ದು, ದೇವೆಗೌಡರ ಕುಟುಂಬವನ್ನು ಗುರಿಯಾಗಿಸಿ ದೂರು ದಾಖಲಿಸಲಾಗಿದೆ.

* ರಾಜ್ಯಪಾಲರ ಹಾಗೂ ಲೋಕಸಭಾ ಸ್ಪೀಕರ್ ಅವರ ಪೂರ್ವಾನುಮತಿಯಿಲ್ಲದೆ ದೂರು ದಾಖಲಿಸಲಾಗಿದೆ.

* ದಾಖಲೆಗಳ ದೃಢಿಕರಣ ಹಾಜರುಪಡಿಸಿಲ್ಲ.

* ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದಿಲ್ಲ.

* ಸಮರ್ಥ ಸಾಕ್ಷ್ಯಾಧಾರ ಒದಗಿಸಲು ವಿಫಲ.


ಎಚ್‌ಡಿಕೆ ದಂಪತಿ ವಿರುದ್ದ ವಕೀಲ ವಿನೋದ್ ಕುಮಾರ ಅವರು ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪ ಮಾಡಿ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.