ADVERTISEMENT

ಎಚ್‌ಡಿಕೆ ಪ್ರಕರಣ: ವಿಶೇಷ ಕೋರ್ಟ್‌ನಲ್ಲಿ ನಾಳೆ ವಿಚಾರಣೆ...

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವಕೀಲ ವಿನೋದ್‌ಕುಮಾರ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಗುರುವಾರ ಪ್ರಕಟಿಸಲಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ಕೋರ್ಟ್ ಮುಂದೆ ಖುದ್ದು ಹಾಜರಿಯಿಂದ ದಿನದ ಮಟ್ಟಿಗೆ ವಿನಾಯಿತಿ ನೀಡಿದ ನ್ಯಾಯ ಮೂರ್ತಿ ಎಲ್.ನಾರಾಯಣಸ್ವಾಮಿ ತೀರ್ಪನ್ನು ಗುರುವಾರ ಪ್ರಕಟಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ, ವಿಶೇಷ ಕೋರ್ಟ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾದಾಗ ಜಂತಕಲ್ ಗಣಿ ಕಂಪೆನಿಯ ಮಾಲೀಕ ವಿನೋದ್ ಗೋಯಲ್ ಮಾತ್ರ ಹಾಜರಿದ್ದರು. ಕುಮಾರಸ್ವಾಮಿ ದಂಪತಿಗೆ ಖುದ್ದು ಹಾಜರಿಯಿಂದ ವಿನಾಯಿತಿ ಕೋರಿ ಅವರ ಪರ ವಕೀಲರು ಮತ್ತೆ ಅರ್ಜಿ ಸಲ್ಲಿಸಿದರು.

ಆದರೆ, ಈಗಾಗಲೇ ಈ ಸಂಬಂಧ ಸಲ್ಲಿಸಿರುವ ಅರ್ಜಿಯ ಬಗ್ಗೆ ಆದೇಶ ಪ್ರಕಟಣೆಗೆ ಸಮಯ ನಿಗದಿಯಾದ ವೇಳೆ ಮತ್ತೆ ಅರ್ಜಿ ಸಲ್ಲಿಸುವುದಕ್ಕೆ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅಸಮಾ ಧಾನ ವ್ಯಕ್ತಪಡಿಸಿದರು.
`ಆರೋಪಿ ಗಳ ಹಾಜ ರಾತಿಗೆ ಸಮಯ ಕೇಳಿ. ಸಂಜೆ 5 ಗಂಟೆಯವರೆಗೂ ಅವಕಾಶ ನೀಡುತ್ತೇನೆ.
 
ನ್ಯಾಯಾಲಯಕ್ಕೆ ತನ್ನದೇ ಆದ ಕಾರ್ಯಗಳಿ ರುತ್ತವೆ. ನ್ಯಾಯಾಲಯವನ್ನು ನಿರುದ್ಯೋಗಿ ಯಾಗಿಸುವ  ಕೆಲಸ ಮಾಡಬೇಡಿ~ ಎಂದು ಕುಮಾರಸ್ವಾಮಿ ಪರ ವಕೀಲರಿಗೆ ತಾಕೀತು ಮಾಡಿದರು.ಕುಮಾರಸ್ವಾಮಿ ಬುಧವಾರ ಬೆಳಿಗ್ಗೆ ಆಸ್ಪತ್ರೆಯೊಂದರಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವ ದಾಖಲೆ ಒದಗಿಸಿ ಖುದ್ದು ಹಾಜರಿ ಯಿಂದ ವಿನಾಯಿತಿ ಕೋರುತ್ತಿರು ವುದಕ್ಕೆ ವಿನೋದ್‌ಕುಮಾರ್ ಪರ ವಕೀಲ ಸಂದೀಪ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.

ಹಿಂದಿನ ವಿಚಾರಣೆಗಳ ವೇಳೆ `ಆರೋಗ್ಯದ ನೆಪ ಹೇಳಿ ವಿನಾಯಿತಿ ಪಡೆದಿದ್ದೇವೆ~ ಎಂದು ಕುಮಾರಸ್ವಾಮಿ ಪರ ವಕೀಲ ಹಸ್ಮತ್ ಪಾಷಾ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಎರಡು ಬಾರಿ ಕಲಾಪವನ್ನು ಮುಂದೂಡಿದ ನ್ಯಾಯಾಧೀಶರು ಮಧ್ಯಾಹ್ನ 1 ಗಂಟೆಗೆ ಖುದ್ದು ಹಾಜರಿ ಯಿಂದ ವಿನಾಯಿತಿ ಕೋರಿರುವ ಕುಮಾರಸ್ವಾಮಿ ಅವರ ಅರ್ಜಿ ಮತ್ತು ದಿನದ ಗೈರುಹಾಜರಿ ಬಗ್ಗೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

ಆದರೆ, 1 ಗಂಟೆಗೆ ಕಲಾಪ ಆರಂಭವಾದಾಗ ಹೈಕೋರ್ಟ್ ದಿನದ ಮಟ್ಟಿಗೆ ವಿನಾಯಿತಿ ನೀಡಿರುವುದನ್ನು ಕುಮಾರ ಸ್ವಾಮಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ಹೈಕೋರ್ಟ್ ಆದೇಶದ ಬಗ್ಗೆ ಖಚಿತ ಪಡಿಸಿಕೊಂಡ ನ್ಯಾಯಾಧೀಶರು, ಶುಕ್ರವಾರ ಕುಮಾರಸ್ವಾಮಿ ಮತ್ತು ಅನಿತಾ ಖುದ್ದು ಹಾಜರಿಗೆ ಆದೇಶಿಸಿದರು.

ಸಿ.ಡಿ ಸಲ್ಲಿಕೆ
`ನೆಪ ಹೇಳಿ ವಿನಾಯಿತಿ ಪಡೆಯಲಾಗಿದೆ~ ಎಂದು ಹಸ್ಮತ್ ಪಾಷಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಗ್ಗೆ ಮಧ್ಯಾಹ್ನ ಪ್ರಮಾಣ ಪತ್ರ ಸಲ್ಲಿಸಿದ ವಿನೋದ್‌ಕುಮಾರ್ ಪರ ವಕೀಲರು, ಈ ಸಂಬಂಧ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಹೇಳಿಕೆಯ ತುಣುಕನ್ನು ಒಳಗೊಂಡ ಸಿ.ಡಿ ಯನ್ನು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.