ADVERTISEMENT

ಎಚ್‌ಡಿಕೆ ಸ್ವಜನ ಪಕ್ಷಪಾತ- ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 16:35 IST
Last Updated 22 ಫೆಬ್ರುವರಿ 2011, 16:35 IST


ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಸ್ವಜನ ಪಕ್ಷಪಾತ ತೋರಿದ್ದಾರೆ, ‘ಜಿ’ ವರ್ಗದ ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ತಮ್ಮ ಒಂಬತ್ತು ಮಂದಿ ಸಂಬಂಧಿಕರಿಗೆ ಹಂಚಿದ್ದಾರೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2006-07ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಅತ್ತೆಯೂ (ಅನಿತಾ ಕುಮಾರಸ್ವಾಮಿ ಅವರ ತಾಯಿ ಎಸ್. ವಿಮಲಾ) ಸೇರಿದಂತೆ ಒಂಬತ್ತು ಮಂದಿಗೆ ಅಕ್ರಮವಾಗಿ ನಿವೇಶನಗಳನ್ನು ಮಂಜೂರು ಮಾಡಿದ್ದರು’ ಎಂದರು.

‘ಕುಮಾರಸ್ವಾಮಿ ಅವರು ನಿವೇಶನ ನೀಡುವ ವೇಳೆಗಾಗಲೇ ವಿಮಲಾ ಅವರು ಜಿ.ಪಿ. ನಗರದಲ್ಲಿ ಒಂದು ಸ್ವಂತ ಮನೆಯನ್ನು ಹೊಂದಿದ್ದರು. ಆದರೆ ತಮ್ಮ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ವಿಮಲಾ ಅವರು ಬಿಡಿಎಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ’ ಎಂದು ಪುಟ್ಟಸ್ವಾಮಿ ಅವರು ಆಪಾದಿಸಿದರು.

ತಮ್ಮ ಆಪಾದನೆಗಳನ್ನು ಸಮರ್ಥಿಸಿಕೊಳ್ಳಲು ಅವರ ಕೆಲವು ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
‘ಕುಮಾರಸ್ವಾಮಿ ಅವರ ಸಂಬಂಧಿಗಳಾದ ರಾಧಮ್ಮ, ಎಚ್. ವಿಶ್ವನಾಥ್, ರಾಮಸ್ವಾಮಿ ಗೌಡ, ಅನಂತರಾಮ ಗೌಡ, ರಾಜಶೇಖರ, ಎಂ.ಕೆ. ಸುಧಾ, ಎನ್.ಆರ್. ಲೋಕೇಶ್ ಮತ್ತು ಕೆ. ಸರಸ್ವತಿ ಅವರು ನಿವೇಶನ ಪಡೆದುಕೊಂಡ ಇತರರು’ ಎಂದು ಪುಟ್ಟಸ್ವಾಮಿ ಹೇಳಿದರು.

‘ಯಾವ ಕಾರಣಕ್ಕಾಗಿ ನಿವೇಶನ ಮಂಜೂರು ಮಾಡಲಾಗಿದೆ, ನಿವೇಶನಗಳನ್ನು ಯಾಕೆ ಹಿಂದಿರುಗಿಸಲಾಗಿಲ್ಲ ಎಂಬುದನ್ನು ಕುಮಾರಸ್ವಾಮಿ ತಿಳಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಕುಮಾರಸ್ವಾಮಿ ಮಾಡಿದ್ದ ಆರೋಪಗಳು ರಾಜಕೀಯ ಪ್ರೇರಿತ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದರು.

‘ಬಹಳ ಸಮಯದಿಂದ ಅಧಿಕಾರ ಅನುಭವಿಸದೆ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಆಧಾರ ರಹಿತ ಆಪಾದನೆಗಳನ್ನು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರಿಂದ 23 ಕೋಟಿ ರೂಪಾಯಿ ವಸೂಲು ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಯಾಗಿ ಧರ್ಮಸಿಂಗ್ ಅವರು ತೆಗೆದುಕೊಂಡ ನಿರ್ಣಯದಿಂದ ರಾಜ್ಯ ಬೊಕ್ಕಸಕ್ಕೆ 23 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿ ಹೇಳಿದ್ದರೂ ಈ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದರು.

ರಾಜ್ಯಸಭೆ ಉಪಸಭಾಪತಿ ರೆಹಮಾನ್‌ಖಾನ್ ಅವರು ಅಮಾನತ್ ಸಹಕಾರಿ ಬ್ಯಾಂಕ್‌ನ ಹಣ ದುರುಪಯೋಗ ಮಾಡಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಯಡಿಯೂರಪ್ಪ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.