ADVERTISEMENT

ಎರಡು ಕ್ಷೇತ್ರಗಳ ಚುನಾವಣೆ: ಕೈ–ದಳ ಮೈತ್ರಿಯಿಲ್ಲ

​ಪ್ರಜಾವಾಣಿ ವಾರ್ತೆ
Published 25 ಮೇ 2018, 20:18 IST
Last Updated 25 ಮೇ 2018, 20:18 IST

ಬೆಂಗಳೂರು: ಜಯನಗರ, ರಾಜರಾಜೇಶ್ವರಿ ನಗರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಪಕ್ಷದ ಮುಖಂಡ ಹನುಮಂತರಾಯಪ್ಪ ಅವರ ಮನೆಯಲ್ಲಿ ಶುಕ್ರವಾರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಜಯನಗರ ಕ್ಷೇತ್ರವನ್ನು ಕಾಂಗ್ರೆಸ್‌ಗೆ, ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಹಂಚಿಕೆ ಮಾಡಿಕೊಳ್ಳುವಂತೆ ಮಾತುಕತೆ ನಡೆಸಲಾಗಿತ್ತು. ಆದರೆ, ಅದು ಫಲ ನೀಡಿಲ್ಲ’ ಎಂದರು.

‘ಈ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್‌ನ ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು, ಪ್ರಮುಖರು ನಮ್ಮ ಪಕ್ಷ ಅಭ್ಯರ್ಥಿ ಜಿ.ಎಚ್‌.ರಾಮಚಂದ್ರ ಅವರಿಗೆ ಬೆಂಬಲ ನೀಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡಬೇಕಿದೆ. ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕಿದೆ’ ಎಂದರು.

ADVERTISEMENT

ಮೈತ್ರಿಗೆ ಭಂಗವಿಲ್ಲ: ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಾಗಿತ್ತು. ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರಿಂದ ಮೈತ್ರಿ ಸರ್ಕಾರಕ್ಕೆ ಅಪಾಯವಿಲ್ಲ. ಇದು ಹೊಸ ಪ್ರಕ್ರಿಯೆ ಅಲ್ಲ ಎಂದು ಗೌಡರು ಹೇಳಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯ ಅಭ್ಯರ್ಥಿಯೊಬ್ಬರು ಅಕ್ರಮ ನಡೆಸಿದ್ದರಿಂದಾಗಿ ಮೇ 12ರ ಚುನಾವಣೆ ಮುಂದೂಡಿಕೆಯಾಗಿತ್ತು.

ಆ ಪಕ್ಷದ ಅಭ್ಯರ್ಥಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.

ಅಭ್ಯರ್ಥಿಯ ಅಕ್ರಮದ  ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದರು.

**

‘ಬಂದ್ ಕರೆ ಉದ್ದೇಶ ಗೊತ್ತಿದೆ’

ಬಿಜೆಪಿಯವರು  ಬಂದ್‌ಗೆ ಕರೆ ನೀಡಿರುವ ಉದ್ದೇಶ ಏನು ಎಂದು ಗೊತ್ತಿದೆ. ಅವರ ಕರೆಗೆ ಜನರು ಹೇಗೆ ಸ್ಪಂದಿಸುತ್ತಾರೆ ಎಂಬುದು ಸೋಮವಾರ ಗೊತ್ತಾಗಲಿದೆ ಎಂದು ದೇವೇಗೌಡರು ಹೇಳಿದರು.

ಇದರ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.