ADVERTISEMENT

ಎಲ್ಲ ಜಾತಿಯವರಿಗೂ ಮೀಸಲಾತಿ ಇರಲಿ

ಕೇಂದ್ರ ಸಚಿವ ರಾಮದಾಸ ಆಠವಲೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಎಲ್ಲ ಜಾತಿಯವರಿಗೂ ಮೀಸಲಾತಿ ಇರಲಿ
ಎಲ್ಲ ಜಾತಿಯವರಿಗೂ ಮೀಸಲಾತಿ ಇರಲಿ   

ಬೀದರ್‌: ‘ಜನಸಂಖ್ಯೆ ಆಧಾರದ ಮೇಲೆ ಎಲ್ಲ ಜಾತಿಯವರಿಗೂ ಮೀಸಲಾತಿ ಕೊಡುವ ಅಗತ್ಯವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಮೀಸಲಾತಿ ಪ್ರಮಾಣವನ್ನು ಶೇ 75ರವರೆಗೂ ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಶಕ್ತಿಕರಣ ಸಚಿವ ರಾಮದಾಸ ಆಠವಲೆ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು, ಕುರುಬರು ಹಾಗೂ ಮರಾಠಿಗರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು’ ಎಂದು ಪ್ರತಿಪಾದಿಸಿದರು.

‘ಎಸ್‌.ಸಿ, ಎಸ್‌.ಟಿ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇರದ ಜಾತಿಗಳನ್ನು ಗುರುತಿಸಿ ಅವರಿಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 25ರಷ್ಟು ಮೀಸಲಾತಿ ಸೌಲಭ್ಯ ಒದಗಿಸಬೇಕು. ತಮಿಳುನಾಡಿನಲ್ಲಿ ಈಗಾಗಲೇ ಶೇ 69ರಷ್ಟು ಮೀಸಲಾತಿ ನೀಡಲಾಗಿದೆ. ಬೇರೆ ರಾಜ್ಯಗಳಲ್ಲೂ ಮೀಸಲಾತಿ ಪ್ರಮಾಣವನ್ನು ಏರಿಕೆ ಮಾಡಬೇಕು’ ಎಂದರು.

ADVERTISEMENT

‘ಮಹಾರಾಷ್ಟ್ರದಲ್ಲಿ ಬೌದ್ಧರಿಗೆ ಮೀಸಲಾತಿ ಸೌಲಭ್ಯ ಒದಗಿಸಲಾಗಿದೆ. ಕರ್ನಾಟಕದಲ್ಲಿರುವ ಬೌದ್ಧರನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಲು ನಿರ್ಣಯ ಕೈಗೊಂಡು ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. ಕೇಂದ್ರದಲ್ಲಿ ಮನುವಾದಿ ಸರ್ಕಾರ ಇಲ್ಲ, ಮಾನವವಾದಿ ಸರ್ಕಾರ ಇದೆ. ಅಂತೆಯೇ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ(ಎ) ಬಿಜೆಪಿಯೊಂದಿಗೆ ಕೈಜೋಡಿಸಿದೆ’ ಎಂದು ಸಮರ್ಥಿಸಿಕೊಂಡರು.

‘2018ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 10 ಸೀಟುಗಳನ್ನು ಬಿಟ್ಟು ಕೊಡಲು ಒಪ್ಪಿದರೆ ಬಿಜೆಪಿಯೊಂದಿಗೆ ಆರ್‌ಪಿಐ ಮೈತ್ರಿ ಮಾಡಿಕೊಳ್ಳಲಿದೆ’ ಎಂದು ತಿಳಿಸಿದರು.

***

ಕ್ರೀಡೆಯಲ್ಲಿ ಮೀಸಲಾತಿ ಕಲ್ಪಿಸಿ
‘ಕ್ರೀಡೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಒದಗಿಸಲು ಕೇಂದ್ರ ಕ್ರೀಡಾ ಸಚಿವ ವಿಜಯ ಗೋಯಲ್ ಕ್ರಮ ಕೈಗೊಳ್ಳಬೇಕು’ ಎಂದು ಆಠವಲೆ ಒತ್ತಾಯಿಸಿದರು.

‘ಭಾರತೀಯ ಕ್ರಿಕೆಟ್‌ ತಂಡದಲ್ಲಿ ವಿನೋದ್‌ ಕಾಂಬ್ಳಿ ನಂತರ ಪರಿಶಿಷ್ಟರು ಬಂದಿಲ್ಲ. ಆದ್ದರಿಂದ ಕ್ರಿಕೆಟ್‌ನಲ್ಲಿ ಪರಿಶಿಷ್ಟರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.