ADVERTISEMENT

ಎಲ್‌ಪಿಜಿ: ಇಂದು ಗಡುವು ಅಂತ್ಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಬೆಂಗಳೂರು: ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ವಿದ್ಯುತ್ ಮೀಟರ್‌ನ ಆರ್‌ಆರ್ ಸಂಖ್ಯೆ ಮತ್ತು ಪಡಿತರ ಚೀಟಿ ಮಾಹಿತಿ ಸಲ್ಲಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಧಿಸಿದ್ದ ಗಡುವು ಸೋಮವಾರ ಅಂತ್ಯಗೊಳ್ಳಲಿದೆ. ಗಡುವನ್ನು ಮತ್ತೆ ವಿಸ್ತರಿಸದಿರಲು ಇಲಾಖೆ ನಿರ್ಧರಿಸಿದೆ.ರಾಜ್ಯದಾದ್ಯಂತ ಗೃಹ ಬಳಕೆಗಾಗಿ ಎಲ್‌ಪಿಜಿ ಸಂಪರ್ಕ ಪಡೆದಿರುವ ಶೇಕಡ 70ರಷ್ಟು ಗ್ರಾಹಕರು ಇಲಾಖೆ ಕೋರಿದ್ದ ಮಾಹಿತಿಯನ್ನು ಸಲ್ಲಿಸಿದ್ದಾರೆ. ಮಾಹಿತಿ ದಾಖಲಿಸುವ ಪ್ರಕ್ರಿಯೆಯಲ್ಲಿ ಈಗಾಗಲೇ ಶೇ 50ರಷ್ಟು ಕೆಲಸ ಪೂರ್ಣಗೊಂಡಿದೆ. ಮಾರ್ಚ್ 10ರ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಅಕ್ರಮ ಎಲ್‌ಪಿಜಿ ಸಂಪರ್ಕಗಳು ಮತ್ತು ಪಡಿತರ ಚೀಟಿಗಳನ್ನು ರದ್ದುಮಾಡುವ ಕೆಲಸ ಆರಂಭವಾಗಲಿದೆ ಎಂದು ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

ಮೊದಲು ಗ್ರಾಹಕರು ಸಲ್ಲಿಸಿರುವ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವ ಕೆಲಸ ನಡೆಯಲಿದೆ. ಇದಕ್ಕಾಗಿ ಆಹಾರ ಇಲಾಖೆಯು ವಿದ್ಯುತ್ ಸರಬರಾಜು ಕಂಪೆನಿಗಳು ಒದಗಿಸಿರುವ ಆರ್‌ಆರ್ ಸಂಖ್ಯೆಯ ಜೊತೆ ಗ್ರಾಹಕರು ನೀಡಿರುವ ಮಾಹಿತಿಯನ್ನು ಹೋಲಿಕೆ ಮಾಡಿ, ಪರಿಶೀಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೊಸ ಪಡಿತರ ಚೀಟಿ: ಅಕ್ರಮ ಎಲ್‌ಪಿಜಿ ಸಂಪರ್ಕಗಳು ಮತ್ತು ಪಡಿತರ ಚೀಟಿಗಳನ್ನು ರದ್ದುಮಾಡಲು ಅಗತ್ಯ ಮಾಹಿತಿ ಸಂಗ್ರಹ ಅಭಿಯಾನ ಆರಂಭಿಸಿದ್ದ ಆಹಾರ ಇಲಾಖೆ, ಬಡತನ ರೇಖೆಗಿಂತ ಮೇಲಿರುವವರಿಗೆ (ಎಪಿಎಲ್) ಹೊಸ ಪಡಿತರ ಚೀಟಿ ವಿತರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು. ಮಾರ್ಚ್ 10ರ ಬಳಿಕ ಹೊಸ ಎಪಿಎಲ್ ಪಡಿತರ ಚೀಟಿಗಳ ವಿತರಣೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.