ADVERTISEMENT

‘ಎಸಿಬಿ ಎಫ್‌ಐಆರ್‌ ದಾಖಲಿಸಿಕೊಳ್ಳದಿದ್ದರೆ ಹೈಕೋರ್ಟ್‌ಗೆ ದೂರು‘

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್ಐಆರ್ ದಾಖಲಿಸಿಕೊಳ್ಳದಿದ್ದರೆ ಹೈಕೋರ್ಟ್‌ ಮೆಟ್ಟಿಲೇರುತ್ತೇನೆ’ ಎಂದು ವಿಧಾನಪರಿಷತ್‌ ಬಿಜೆಪಿ ಸದಸ್ಯ ಬಿ.ಜೆ ಪುಟ್ಟಸ್ವಾಮಿ ಎಚ್ಚರಿಕೆ ನೀಡಿದರು.

‘ನಾನು ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ಕೊಟ್ಟಿದ್ದೇನೆ. ಎಸಿಬಿ ಒಂದು ವಾರದೊಳಗೆ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಪ್ರತಿಭಟನೆ ಕೂಡಾ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.

‘ನನ್ನ ಜೀವನದಲ್ಲಿ ದಾಖಲೆಗಳಿಲ್ಲದೆ ಯಾವುದೇ ಆರೋಪ ಮಾಡಿದವನಲ್ಲ. ನಾನು ಬಿಡುಗಡೆ ಮಾಡಿದ ದಾಖಲೆಗಳನ್ನು ಸುಳ್ಳು ಎಂದು ಮುಖ್ಯಮಂತ್ರಿ ಉಡಾಫೆಯಿಂದ ಮಾತನಾಡುತ್ತಿದ್ದಾರೆ. ಉಡಾಫೆಯಿಂದಲೇ ಅರ್ಕಾವತಿ ಬಡಾವಣೆಯ 950 ಎಕರೆ ಜಾಗ ನುಂಗಿ ನೀರು ಕುಡಿದಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಭೂಪಸಂಧ್ರದಲ್ಲಿ 6.26 ಎಕರೆ ಡಿನೋಟಿಫಿಕೇಷನ್ ದಾಖಲೆಗಳು ನನ್ನ ಬಳಿ ಇವೆ. ಈ ಎರಡೂ ಪ್ರಕರಣಗಳ ದಾಖಲೆಗಳನ್ನು ಮುಖ್ಯಮಂತ್ರಿಗೆ ಈಗಾಗಲೇ ಕಳುಹಿಸಿಕೊಟ್ಟಿದ್ದೇನೆ. ಅವರೂ ಆ ದಾಖಲೆಗಳನ್ನು ಓದಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.