ADVERTISEMENT

ಏನಾದರೂ ಮಾಡಲು ಬಿಎಸ್‌ವೈ ಸ್ವತಂತ್ರರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಬಳ್ಳಾರಿ: `ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಅವರು ಸ್ವತಂತ್ರರು. ಅವರು ಹೊಸ ಪಕ್ಷವನ್ನಾದರೂ ಸ್ಥಾಪಿಸಲಿ, ಇನ್ನೇನಾದರೂ ಮಾಡಲಿ. ಪಕ್ಷ ಬಿಟ್ಟು ಹೋಗುವ ಯಾರಿಗೂ ಬಿಜೆಪಿಯಲ್ಲಿಯೇ ಉಳಿಯುವಂತೆ ಬಲವಂತ ಮಾಡುವುದಿಲ್ಲ~ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೋಮವಾರ ಇಲ್ಲಿ ಕಡ್ಡಿ ಮುರಿದಂತೆ ಹೇಳಿದರು.

`ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಪಕ್ಷದ ಮುಖಂಡ ಅರುಣ್ ಜೇಟ್ಲಿ ಅವರು ಬೆಂಗಳೂರಿಗೆ ಆಗಮಿಸಿ ಮನವೊಲಿಸಲು ನೋಡಿದರೂ ಅದಕ್ಕೆ ಬೆಲೆ ನೀಡದೆ, ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಅವರಿಗೆ ಏನು ಹೇಳಿಕೆ ನೀಡುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲ~ ಎಂದು ಸುದ್ದಿಗೋಷ್ಠಿಯಲ್ಲಿ  ಕುಟುಕಿದರು.

`ಬಿಜೆಪಿಯ ಸಚಿವರು ಮತ್ತು ಶಾಸಕರ‌್ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕೆಲವರು ಪಕ್ಷ ಬಿಟ್ಟು ಹೋಗಲಿದ್ದಾರೆ ಎಂಬುದು ವದಂತಿ ಮಾತ್ರ. ಬಳ್ಳಾರಿಯಲ್ಲಿ ಈ ಹಿಂದೆ ಬಿ.ಶ್ರೀರಾಮುಲು ಅವರೊಂದಿಗೆ ಅನೇಕ ಶಾಸಕರು, ಸಂಸದರು ಪಕ್ಷ ಬಿಟ್ಟು ಹೋಗಿರುವುದು ಬೇರೆ ವಿಷಯ. ಬಳ್ಳಾರಿಯ ಪ್ರಕರಣವೇ ಬೇರೆ. ಆಗ ಅವರೆಲ್ಲರಿಗೂ ನೋಟಿಸ್ ನೀಡಲಾಗಿತ್ತು. ಅದಕ್ಕವರು ಉತ್ತರ ನೀಡಿದ್ದರಿಂದ ಪಕ್ಷದಲ್ಲಿ ಮುಂದುವರಿಸಲಾಗಿದೆ ಎಂದು ಹೇಳಿದರು.

ಅಡ್ವಾಣಿ ವಿರುದ್ಧ ಟೀಕೆಯಿಂದ ನೋವು: ~ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರಿಗೆ ಧಿಕ್ಕಾರ ಹೇಳಿರುವ ಯಡಿಯೂರಪ್ಪ ಹೇಳಿಕೆಯಿಂದ ನಾನು ಸೇರಿದಂತೆ ಪಕ್ಷದ ಕೋಟ್ಯಂತರ ಕಾರ್ಯಕರ್ತರಿಗೆ ತೀವ್ರ ನೋವಾಗಿದೆ. ಆದರೂ ಅವರ ಹೇಳಿಕೆಗಳ ಕುರಿತು ತಲೆ ಕೆಡಿಸಿಕೊಳ್ಳಲ್ಲ~ ಎಂದರು.

`ಯಡಿಯೂರಪ್ಪ ದೊಡ್ಡವರು. ಅವರನ್ನು ಟೀಕಿಸುವಷ್ಟು, ಅವರ ವಿರುದ್ಧ ಹೇಳಿಕೆ ನೀಡುವಷ್ಟು ದೊಡ್ಡವನು ನಾನಲ್ಲ. ಆದರೆ, ಬಿಜೆಪಿ ನಮ್ಮ ತಾಯಿ ಇದ್ದಂತೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಉತ್ತಮ ಹೆಸರು ಗಳಿಸಿ, ಪಕ್ಷ ಸಂಘಟಿಸಿರುವ ಅಡ್ವಾಣಿ ಅವರ ವಿರುದ್ಧ ಹೇಳಿಕೆ ನೀಡಿರುವುದು ನಿಜಕ್ಕೂ ನಮ್ಮನ್ನು ಘಾಸಿಗೊಳಿಸಿದೆ. ಬೆಳಗಾವಿಯಲ್ಲಿ ಡಿಸೆಂಬರ್ 5ರಿಂದ 12ರವರೆಗೆ ಅಧಿವೇಶನ ನಡೆಸುತ್ತೇವೆ. ಈ ಕುರಿತು ಸಂಶಯವೇ ಬೇಡ~ ಎಂದರು.

ಶಿಷ್ಟಾಚಾರದ ಅರಿವು ಇಲ್ಲ: ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿಷ್ಟಾಚಾರದ ಅರಿವು ಇಲ್ಲ. ಇನ್ನೂ ತಾವು ಮುಖ್ಯಮಂತ್ರಿ ಎಂದು ಭಾವಿಸಿದ್ದಾರೆ. ಹೋದ ಕಡೆಗಳಲ್ಲಿ  ಹೆಚ್ಚು ಆರ್ಭಟ ಮಾಡುತ್ತಿದ್ದಾರೆ. ಅವರ ಆರ್ಭಟದಿಂದ ಯಾವುದೇ ಪ್ರಯೋಜನವಾಗುವುದಿಲ್ಲ

-ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT