ಬೆಂಗಳೂರು: ‘ನೀನಿಲ್ಲದೆ’ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಿವಗಣಪತಿ ಅವರ ವಿರುದ್ಧ ಕಾನೂನು ಸಮರ ಸಾರಿದ್ದ ನಟಿ ಪೂಜಾ ಗಾಂಧಿ ಕೊನೆಗೂ ‘ಗೆದ್ದಿದ್ದಾರೆ’!
ಈ ಚಿತ್ರಕ್ಕೆ ಬರಬೇಕಿದ್ದ ಒಟ್ಟು ಸಂಭಾವನೆ ಪೈಕಿ ಪ್ರಥಮ ಹಂತದಲ್ಲಿ ಸಿಗಬೇಕಿದ್ದ ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಲು ಶಿವಗಣಪತಿ ಅವರು ಗುರುವಾರ ಸಿವಿಲ್ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ, ಇದೇ ಶುಕ್ರವಾರ ಚಿತ್ರದ ಬಿಡುಗಡೆಗೆ ಹಾದಿಯೂ ಸುಗಮಗೊಂಡಿದೆ.
ಒಪ್ಪಂದದ ಪ್ರಕಾರ, ದಕ್ಷಿಣ ಕನ್ನಡ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿನ ಚಿತ್ರ ಹಂಚಿಕೆಯ ಹಕ್ಕನ್ನು ಪೂಜಾ ಅವರಿಗೆ ನೀಡಲಾಗಿದೆ. ಅದರಲ್ಲಿ ಬಂದ ಲಾಭಾಂಶದಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ಪೂಜಾ ಅವರಿಗೆ ನೀಡಲಾಗುವುದು.
ಒಂದು ವೇಳೆ ಅದಕ್ಕಿಂತ ಹೆಚ್ಚಿಗೆ ಲಾಭ ದೊರೆತರೆ ಹೆಚ್ಚುವರಿ ಹಣವನ್ನು ಶಿವಗಣಪತಿ ಅವರಿಗೆ ನೀಡಬೇಕು, ಕಡಿಮೆ ಲಾಭ ಬಂದರೆ, ಶಿವಗಣಪತಿ ಅವರು ಉಳಿದ ಹಣವನ್ನು ಪೂಜಾ ಅವರಿಗೆ ತುಂಬಿ ಕೊಡಬೇಕು. ಈ ಒಪ್ಪಂದದ ಕುರಿತು ಶಿವಗಣಪತಿ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು.
‘ಚಿತ್ರೀಕರಣ ಪೂರ್ಣಗೊಂಡರೂ ತಮಗೆ ದೊರಕಬೇಕಿರುವ 12 ಲಕ್ಷ ರೂಪಾಯಿಗಳ ಸಂಭಾವನೆ ಪೈಕಿ ಆರಂಭಿಕ ಹಂತದ ನಾಲ್ಕು ಲಕ್ಷ ರೂಪಾಯಿಗಳನ್ನೇ ಶಿವಗಣಪತಿ ಅವರು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಸಂಭಾವನೆ ನೀಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೀಡಿರುವ ದೂರು ಇತ್ಯರ್ಥಗೊಳ್ಳುವವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಬೇಕು’ ಎಂದು ಕೋರಿ ಪೂಜಾ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಒಪ್ಪಂದದ ಹಿನ್ನೆಲೆಯಲ್ಲಿ ಕೋರ್ಟ್ ಇತ್ಯರ್ಥಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.