ADVERTISEMENT

ಕಂಬಳಿ ನೇಕಾರ ಇಂದು ಹೆಚ್ಚುವರಿ ಎಜಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 23 ಜುಲೈ 2013, 20:34 IST
Last Updated 23 ಜುಲೈ 2013, 20:34 IST
ಕಾಂತರಾಜ್
ಕಾಂತರಾಜ್   

ಮೊಳಕಾಲ್ಮುರು: ಕಡು ಬಡ ಕುಟುಂಬದಲ್ಲಿ ಜನಿಸಿ, ಕಷ್ಟಪಟ್ಟು ವಕೀಲ ಪದವಿ ಪಡೆದು ಇಂದು ರಾಜ್ಯಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿದವರು ತಾಲ್ಲೂಕಿನ ಕೊಂಡ್ಲಹಳ್ಳಿಯ ಎಚ್. ಕಾಂತರಾಜ್.

ಕೊಂಡ್ಲಹಳ್ಳಿಯ ಹೊನ್ನಪ್ಪ ಮತ್ತು ಚನ್ನಮ್ಮ ದಂಪತಿ ದ್ವಿತೀಯ ಪುತ್ರರಾದ ಕಾಂತರಾಜ್ (ಜನನ: 1953) 1978 ರಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿ, ನಂತರ ಹಿಂದುಳಿದ ಆಯೋಗ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.

ಶಾಲಾ ದಿನಗಳಲ್ಲಿ ಬಿಡುವಿನ ವೇಳೆ ಕಂಬಳಿ ನೇಯ್ಗೆ, ಕೂಲಿ ಕೆಲಸಮಾಡುತ್ತಾ ಬಂದ ಕೂಲಿ ಹಣದಲ್ಲಿ ವ್ಯಾಸಂಗ ಮಾಡಿದ್ದರು. ಆಗ ಅವರ ಕುಟುಂಬದವರ ಆದಾಯ ದಿನಕ್ಕೆ ರೂ 25!

ವೃತ್ತಿಯಲ್ಲಿ ತೋರಿದ ನಿಷ್ಠೆಯಿಂದಾಗಿ ಇಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿರುವ ಅವರು ಮಂಗಳವಾರ `ಪ್ರಜಾವಾಣಿ' ಜತೆ ಮಾತನಾಡಿದರು.

ಕಷ್ಟಪಟ್ಟು ಮೇಲೆ ಬಂದ ನೀವು ಈಗ ಉನ್ನತ ಹುದ್ದೆ ಅಲಂಕರಿಸಿದ್ದೀರಿ, ಏನು ಅನಿಸುತ್ತಿದೆ ?
ರೈತ ಕುಟುಂಬದಿಂದ ಬಂದ ನನಗೆ ಈ ಹುದ್ದೆ ಸಿಕ್ಕಿರುವುದು ತುಂಬಾ ಖುಷಿ ತರುವ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ನಾನು ವೃತ್ತಿಯನ್ನು ಅತ್ಯಂತ ಪ್ರೀತಿಸಿ, ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಕ್ಕೆ ಇದು ಫಲ ಎಂದು ಭಾವಿಸಿದ್ದೇನೆ.

ನಿಮ್ಮ ಮುಂದಿರುವ ಆಶಯಗಳು ಏನು?
ಬೇರುಮಟ್ಟದ ಜನರ ಶ್ರೇಯಸ್ಸಿಗಾಗಿ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ನ್ಯಾಯ, ಹಿತಾಸಕ್ತಿ ಕಾರ್ಯಕ್ರಮಗಳನ್ನು ಎತ್ತಿ ಹಿಡಿಯುವ ಕೆಲಸ, ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು.

ವಕೀಲರಿಗೆ ನಿಮ್ಮ ಸಲಹೆಯೇನು?
ಯಾರೇ ಆಗಲಿ ಧರ್ಮ ಹಾಗೂ ಕಾನೂನಿನಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು, ಕಕ್ಷಿದಾರರ ಹಿತಕ್ಕಿಂತಲೂ ಕಾನೂನಿನ ಹಿತ ಕಾಯುವುದು ಮುಖ್ಯ ಎಂಬುದು ನನ್ನ ಸಲಹೆ.

ನಿಮ್ಮ ಆಕಾಂಕ್ಷೆ?
ಸಾಂವಿಧಾನಿಕ ಆಶಯಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.