ADVERTISEMENT

ಕಕ್ಕಳಮೇಲಿ ಸ್ವಾಮೀಜಿ ಕೊಲೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಸಿಂದಗಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದ ಹಿರೇಮಠದ ಪೀಠಾಧೀಶ ನೂರಂದೇಶ್ವರ ಶಿವಾಚಾರ್ಯ (35) ಅವರನ್ನು ಸೋಮವಾರ ರಾತ್ರಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಡಲಿಯಿಂದ ತಲೆ ಮತ್ತು ಭುಜಕ್ಕೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸ್ವಾಮೀಜಿ ಅವರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗದಲ್ಲೇ ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಮಠದ ಆಸ್ತಿಯಲ್ಲಿ ತಮಗೆ ಪಾಲು ನೀಡುವಂತೆ ಕುಟುಂಬದ ಕೆಲವು ಸದಸ್ಯರು ನ್ಯಾಯಾಲಯದ ಕಟ್ಟೆ ಹತ್ತಿದ್ದರು. ನ್ಯಾಯಾಲಯದಲ್ಲಿ ಸ್ವಾಮೀಜಿ ಪರವಾಗಿ ತೀರ್ಪು ಬಂದಿದ್ದರಿಂದ ಕೊಲೆ ನಡೆದಿದೆ ಎನ್ನಲಾಗಿದೆ.

 ಸ್ವಾಮೀಜಿ ಅವರ ಅಣ್ಣ ಮಹಾಂತಯ್ಯ,  ಆತನ ಪುತ್ರ ಗುರು ಸ್ವಾಮಿ, ಸೋದರ ಸಂಬಂಧಿಗಳಾದ ಗುರುಲಿಂಗಯ್ಯ, ನೂರಂದಯ್ಯ ಅವರ ವಿರುದ್ಧ  ಸ್ವಾಮೀಜಿ ಯವರ  ಇನ್ನೊಬ್ಬ ಅಣ್ಣ  ರುದ್ರಯ್ಯ  ಮಳೆಯ್ಯ ಹಿರೇಮಠ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಂತ್ಯಸಂಸ್ಕಾರ: ಸಿಂದಗಿ ಸಾರಂಗಮಠ, ವಿರಕ್ತಮಠ, ಸೊನ್ನ, ಜೇರಟಗಿ, ಕೋರಳ್ಳಿ, ನಾದ, ಸೊಲ್ಲಾಪುರ ಮಠಗಳ ಶ್ರೀಗಳ ಸಮ್ಮುಖದಲ್ಲಿ  ಅಂತ್ಯಕ್ರಿಯೆ ಮಠದ ಆವರಣದಲ್ಲಿ ಮಂಗಳವಾರ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.