ADVERTISEMENT

`ಕಡು ಬಡವರ' ನಿರ್ಧಾರ: ಆಹಾರ ನಿರೀಕ್ಷಕರಿಗೆ ಹೊಣೆ

ರಾಜೇಶ್ ರೈ ಚಟ್ಲ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಹುಬ್ಬಳ್ಳಿ: ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಎಪಿಎಲ್, ಬಿಪಿಎಲ್ (ಕಡು ಬಡವ) ಕುಟುಂಬಗಳನ್ನು ನಿರ್ಧರಿಸುವ ಹೊಣೆಯನ್ನು ಆಹಾರ ನಿರೀಕ್ಷಕರಿಗೆ ವಹಿಸಲಾಗಿದೆ.

ಅರ್ಜಿದಾರನ ಮನೆಗೆ ಆಹಾರ ನಿರೀಕ್ಷಕ ಸಮೀಕ್ಷೆಗೆ ಹೋಗುವ ಮೊದಲು ಅರ್ಜಿಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಕೊಟ್ಟಿರುವ ವಿವರಗಳನ್ನು ದೃಢಪಡಿಸಿಕೊಳ್ಳಬೇಕು. ಅಗತ್ಯಬಿದ್ದರೆ ಅರ್ಜಿದಾರನನ್ನು `ಪರಿಚಯಿಸಿದ' ವ್ಯಕ್ತಿಯನ್ನೂ ವಿಚಾರಿಸಬೇಕು. ಇದಕ್ಕೂ ಮೊದಲು ಸಮೀಕ್ಷೆಗೆ ಬರುವುದಾಗಿ ಅರ್ಜಿದಾರನಿಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಮೊಬೈಲ್ ಕರೆ ಅಥವಾ ಎಸ್‌ಎಂಎಸ್‌ಗೆ ಸ್ಪಂದಿಸದಿದ್ದರೆ 2-3 ದಿನಗಳ ನಂತರ ಮತ್ತೆ ಪ್ರಯತ್ನಿಸಲಾಗುವುದು. ಮೊಬೈಲ್ ಲಭ್ಯವಿಲ್ಲದ ಗ್ರಾಮಾಂತರ ಪ್ರದೇಶಗಳಲ್ಲಿ ನೇರವಾಗಿ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ದಾಖಲೆಗಳ ಪರಿಶೀಲನೆ ಮತ್ತು ಅರ್ಜಿಯಲ್ಲಿರುವ ಪ್ರಶ್ನಾವಳಿಗಳನ್ನು ಆನ್‌ಲೈನ್‌ನಲ್ಲಿ ಪೂರ್ತಿಗೊಳಿಸಿದ ಬಳಿಕ ಅಂತಿಮವಾಗಿ ಆ ಅರ್ಜಿದಾರನಿಗೆ ಯಾವ ವರ್ಗದ ಪಡಿತರ ಚೀಟಿ ನೀಡಬೇಕು ಎಂದು ಆಹಾರ ನಿರೀಕ್ಷಕರು ನಿರ್ಧರಿಸುವರು. ನಂತರ ಹೊಸ ಕಾರ್ಡ್ ಸಿದ್ಧಗೊಳ್ಳಲಿದ್ದು, ಅರ್ಜಿದಾರರಿಗೆ ಎಸ್‌ಎಂಎಸ್ ಕಳುಹಿಸಲಾಗುವುದು. ಆಹಾರ ನಿರೀಕ್ಷಕರು ಅರ್ಜಿದಾರನ ಬೆರಳಚ್ಚು ದೃಢೀಕರಿಸಿ ಹೊಸ ಪಡಿತರ ಚೀಟಿ ವಿತರಿಸುವರು. 2010 ಡಿಸೆಂಬರ್‌ಗಿಂತ ಹಿಂದೆ ನೀಡಲಾದ ಪಡಿತರ ಚೀಟಿದಾರರಿಗೆ ಮತ್ತು ತಾತ್ಕಾಲಿಕ ಪಡಿತರ ಚೀಟಿ ಹೊಂದಿದವರಿಗೆ ಹೊಸ ಆನ್‌ಲೈನ್ ಅರ್ಜಿದಾರ ಮಾದರಿಯಲ್ಲೇ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ ನವೀಕರಿಸಿದ ಹೊಸ ಕಾರ್ಡ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಬದಲಿಸಲು ಅಥವಾ ಹೊಸ ಹೆಸರು ಸೇರಿಸಲು ಇನ್ನು ಮುಂದೆ ತಾಲ್ಲೂಕು ಕಚೇರಿಗೆ  ಅಲೆಯುವ ಅಗತ್ಯವಿಲ್ಲ.

ನಕಲಿಗೆ ಕಡಿವಾಣ
ಒಂದೇ ಕುಟುಂಬದವರ ಹೆಸರುಗಳು ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳಲ್ಲಿ ಇದ್ದರೆ ಪತ್ತೆ ಮಾಡುವ ಮತ್ತು ನಕಲಿ ಪಡಿತರ ಚೀಟಿಗಳನ್ನು ಹುಡುಕಿಕೊಡುವ ಮಾಹಿತಿಗಳನ್ನು ಇಲಾಖೆಯ ಅಂತರಜಾಲ ತಾಣದಲ್ಲಿ ಸಾರ್ವಜನಿಕರು ದಾಖಲಿಸಬಹುದು. ತಾಲ್ಲೂಕುವಾರು ಆಹಾರ ನಿರೀಕ್ಷಕರು ಇವುಗಳನ್ನು ಪರಿಶೀಲಿಸಿ, ಪಡಿತರ ಚೀಟಿ ರದ್ದುಗೊಳಿಸುವ, ಬಿಪಿಎಲ್‌ನಿಂದ ಎಪಿಲ್‌ಗೆ ಬದಲಿಸುವ ಅಥವಾ ಸುಳ್ಳು ಹೇಳಿ ಹೆಸರು ಸೇರಿಸಿದ್ದರೆ ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಲಾಖೆ ತೆಗೆದುಕೊಂಡ ಕ್ರಮವನ್ನು ಅಂತರಜಾಲ ತಾಣದಲ್ಲಿ ವೀಕ್ಷಿಸಲು ಅವಕಾಶ ಇದೆ
-ಕೆ.ಎಸ್.ಕಲ್ಲನಗೌಡ್ರು (ಧಾರವಾಡ ಜಿಲ್ಲಾ ಉಪ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.