ADVERTISEMENT

ಕದ ಮುಚ್ಚಿದ 2300 ಸಾಕ್ಷರತಾ ಕೇಂದ್ರಗಳು

ಅಕ್ಷರ ಕ್ರಾಂತಿಗೆ ಗ್ರಾಮ ಪಂಚಾಯ್ತಿಗಳ ಅಸಹಕಾರ!

ಮಲ್ಲೇಶ್ ನಾಯಕನಹಟ್ಟಿ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ದಾವಣಗೆರೆ:  ರಾಜ್ಯದಲ್ಲಿ ‘ಸಾಕ್ಷರತಾ ಸಪ್ತಾಹ’, ‘ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ'ಯನ್ನು ಅದ್ದೂರಿ­ಯಾಗಿ ಆಚರಿಸಲಾಗುತ್ತಿದೆ. ಆದರೆ, ರಾಜ್ಯದ ಹಿಂದುಳಿದ ಜಿಲ್ಲೆ­ಗಳಲ್ಲಿ ಅನಕ್ಷರತೆ ನಿವಾರಣೆಗೆ ಸರ್ಕಾರ ಸ್ಥಾಪಿಸಿರುವ 2300 ‘ಸಾಕ್ಷರತಾ ಕಲಿಕಾ ಕೇಂದ್ರಗಳು' ಸಾಕ್ಷರತಾ ದಿನಾಚರಣೆಯನ್ನು ಅಣಕಿಸುವಂತೆ ಕದಮುಚ್ಚಿವೆ!

ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ರಾಜ್ಯ ಸರ್ಕಾರ ಧಾರವಾಡ, ದಾವಣಗೆರೆ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನು ಸಾಕ್ಷರತೆಯಲ್ಲಿ ಹಿಂದುಳಿ­ದಿರುವ ಜಿಲ್ಲೆಗಳೆಂದು ಘೋಷಿಸಿತ್ತು. ಈ ಆರು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮೀಕ್ಷಾ ಕಾರ್ಯ ಕೈಗೊಳ್ಳುವ ಮೂಲಕ ಸುಮಾರು 23 ಸಾವಿರ ಅನಕ್ಷರಸ್ಥರನ್ನು ಗುರುತಿಸ­ಲಾಗಿದೆ. ಇವರಲ್ಲಿ ಸುಮಾರು 18 ಸಾವಿರ ಮಹಿಳೆಯರು ಇದ್ದಾರೆ.

ಅವರನ್ನು ಅಕ್ಷರಸ್ಥರನ್ನಾಗಿಸುವ ಉದ್ದೇಶ­ದಿಂದ ಸರ್ಕಾರ 2,300 ಸಾಕ್ಷರತಾ ಕಲಿಕಾ ಕೇಂದ್ರಗಳನ್ನು ತೆರೆಯುವ ಮೂಲಕ ಆಯವ್ಯಯದಲ್ಲಿ ರೂ. 45ಲಕ್ಷ ಅನುದಾನ ಮೀಸಲಿಟ್ಟಿತು. ಕಲಿಕಾ ಕೇಂದ್ರದಲ್ಲಿ ಕಲಿಕಾರ್ಥಿಗಳ ಅಕ್ಷರ ತರಬೇತಿಗಾಗಿ ಪ್ರತಿ 10 ಕಲಿಕಾರ್ಥಿಗಳಿಗೆ ಒಬ್ಬರಂತೆ 2,300 ಸ್ವಯಂ ಸೇವಕರನ್ನು ನೇಮಿಸಿಕೊಳ್ಳ­ಲಾಗಿದೆ. ಆದರೆ, ಸರ್ಕಾರ ನಿಗದಿ­ಗೊಳಿಸಿದ್ದ ರೂ. 45 ಲಕ್ಷ ಅನುದಾನದಲ್ಲಿ ಇದುವರೆಗೆ ಬಿಡಿಗಾಸೂ ಮಂಜೂ­ರಾಗಿಲ್ಲ.

ಹೀಗಾಗಿ ಗೌರವಧನವಿಲ್ಲದೇ ಸ್ವಯಂ ಸೇವಕರು ಆಸಕ್ತಿ ಕಳೆದು­ಕೊಂಡಿದ್ದು, ಈ ಜಿಲ್ಲೆಗಳ ಸಾಕ್ಷರತಾ ಕೇಂದ್ರಗಳು ಹಾಳು ಸುರಿಯ­ತೊಡಗಿವೆ. ಕದ ಮುಚ್ಚಿರುವ ಕಲಿಕಾ ಕೇಂದ್ರಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ  2009ರಲ್ಲಿ ಮತ್ತೆ ‘ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರ’ ಸಾಕ್ಷರತಾ ಕಾರ್ಯಕ್ರಮಗಳಿಗೆ ರೂ. 25 ಸಾವಿರ ವೆಚ್ಚ ಮೀಸಲಿಡುವಂತೆ ಗ್ರಾಮ ಪಂಚಾಯ್ತಿ­ಗಳಿಗೆ ಆದೇಶಿಸಿತ್ತು. ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹ­ಣಾಧಿ­ಕಾರಿಗಳು ಸರ್ಕಾರದ ಆದೇಶ ಕಡ್ಡಾಯ­ವಾಗಿ ಪಾಲಿಸುವಂತೆ ಗ್ರಾಮ ಪಂಚಾಯ್ತಿಗಳಿಗೆ ಜ್ಞಾಪನಾ ಪತ್ರ ಹೊರಡಿ­ಸಿದ್ದರು. ಆದರೆ, ಗ್ರಾಮ ಪಂಚಾಯ್ತಿಗಳು ಮಾತ್ರ ಇದುವರೆಗೂ ಸಾಕ್ಷ­ರತಾ ಕಾರ್ಯ­ಕ್ರಮ­ಗಳಿಗೆ ಬಿಡಿ­ಗಾಸು ನೀಡದೇ ಅಸಹಕಾರ ತೋರಿ­ಸಿವೆ! ಹೀಗಾಗಿ, ಜಿಲ್ಲೆಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ಜಾರಿಯಲ್ಲಿ­ದ್ದರೂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂ­ತಾಗಿದೆ.

ಹಿಂದುಳಿದ ಜಿಲ್ಲೆಗಳನ್ನು ಹೊರತು­ಪಡಿಸಿ ರಾಜ್ಯದ 17 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ‘ಸಾಕ್ಷರತಾ ಭಾರತ್’ ಯೋಜನೆ ಜಾರಿಗೊಳಿಸಿದೆ. ಅಲ್ಲಿ ಪ್ರೇರಕರು, ಉಪ ಪ್ರೇರಕರು ಕಲಿಕಾರ್ಥಿಗಳಿಗೆ ಅಕ್ಷರಭ್ಯಾಸ ಮಾಡಿಸುತ್ತಿದ್ದಾರೆ. ಪ್ರೇರಕರಿಗೆ ಗೌರವ ಧನ ಸಿಗುತ್ತಿದೆ. ಆದರೆ, ಹಿಂದುಳಿದ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಸಾಕ್ಷರತಾ ಕಲಿಕಾ ಕೇಂದ್ರಗಳು ‘ಅಕ್ಷರ ಕ್ರಾಂತಿ’ ಮಾಡುವ ಮೊದಲೇ ಕತ್ತಲ ಕೂಪದಲ್ಲಿ ಮುಳುಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.