ADVERTISEMENT

ಕನಕಕ್ಕೆ ದುಂಬಾಲು; ಲಾಠಿ ರುಚಿ

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST
ಕನಕಕ್ಕೆ ದುಂಬಾಲು; ಲಾಠಿ ರುಚಿ
ಕನಕಕ್ಕೆ ದುಂಬಾಲು; ಲಾಠಿ ರುಚಿ   

ಹಾವೇರಿ: ಜಿಲ್ಲೆಯ ವಿವಿಧೆಡೆ ರೈತರು `ಕನಕ~ ಬಿ.ಟಿ.ಹತ್ತಿ ಬೀಜ ಖರೀದಿಗೆ ಮುಗಿಬಿದ್ದ ಪರಿಣಾಮ ಹಲವೆಡೆ ಪ್ರತಿಭಟನೆ, ನೂಕಾಟ-ತಳ್ಳಾಟ ಉಂಟಾಗಿ, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಾವೇರಿಯಲ್ಲಿ ಗದ್ದಲ ವಿಪರೀತ ಹೆಚ್ಚಾಗಿ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ರೈತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಹಾವೇರಿಯಲ್ಲಿ ನೂಕಾಟ ಸಂದರ್ಭದಲ್ಲಿ ಹಲವಾರು ರೈತರು ತಂತಿಬೇಲಿ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಮುಂದಾದ ಕೆಲವು ಪೊಲೀಸರೂ ಬಿದ್ದು ಗಾಯಗೊಂಡರು. ಗದ್ದಲದಲ್ಲಿ ಸಿಕ್ಕಿಕೊಂಡ ಮಕ್ಕಳು-ಮಹಿಳೆಯರಲ್ಲಿ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಪೊಲೀಸರು ಲಾಠಿ ಬೀಸಿದರು. ಪರಿಸ್ಥಿತಿ ತಿಳಿಗೊಂಡ ನಂತರ ಬೀಜ ಖರೀದಿ ಸುಸೂತ್ರವಾಗಿ ನಡೆಯಿತು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1.07 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಇದೆ.

ಆದ್ದರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ವಿಪರೀತ ಹೆಚ್ಚಾಗಿದೆ. ಜಿಲ್ಲೆಗೆ 28,000 ಕೆ.ಜಿ (ಪ್ಯಾಕೇಟ್) ಬಿತ್ತನೆ ಬೀಜ ಬರಬೇಕಿತ್ತು. ಆದರೆ ಬಂದಿರುವುದು ಕೇವಲ 18,051 ಪ್ಯಾಕೇಟ್ ಮಾತ್ರ. ಎಲ್ಲ ತಾಲ್ಲೂಕುಗಳಲ್ಲೂ ವಿತರಣೆಗೆ ಕೃಷಿ ಇಲಾಖೆ ಎಪಿಎಂಸಿ ಯಾರ್ಡ್‌ಗಳಲ್ಲಿ ವ್ಯವಸ್ಥೆ ಮಾಡಿತ್ತು. ಹಾವೇರಿಗೆ ನಿಗದಿಯಾಗಿದ್ದ 3,181 ಪ್ಯಾಕೇಟ್ ಬೀಜ ಖರೀದಿಗೆ 10,000 ದಿಂದ 12,000 ರೈತರು ಸೋಮವಾರ ಸಂಜೆಯಿಂದಲೇ ಜಮಾಯಿಸಿದ್ದರು.  ಮಂಗಳವಾರ ಬೆಳಿಗ್ಗೆ ವಿತರಣೆ ಆರಂಭವಾಗುತ್ತಿದ್ದಂತೆಯೇ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದ ಕಾರಣ ನೂಕಾಟ-ತಳ್ಳಾಟ ಹೆಚ್ಚಾಯಿತು.

ಪೊಲೀಸರು ಕಟಕಟೆಗಳನ್ನು ಹಾಕಿ ತಡೆಯಲು ಯತ್ನಿಸಿದರೂ ಪ್ರಯೋಜವಾಗಲಿಲ್ಲ. ಒಂದೇ ಕಡೆ ರೈತರು ಜಮಾಯಿಸಿದ್ದರಿಂದ ಗದ್ದಲ ಹೆಚ್ಚಾಯಿತು. ಸರದಿಯಲ್ಲಿ ಬರುವಂತೆ ಪೊಲೀಸರು ಪದೇ ಪದೇ ಮನವಿ ಮಾಡಿದರೂ ಅವರ ಮಾತು ಕೇಳುವ ಸ್ಥಿತಿಯಲ್ಲಿ ರೈತರು ಇರಲಿಲ್ಲ. ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಪೊಲೀಸರು ಲಾಠಿ ಬೀಸಿ ರೈತರನ್ನು ಚದುರಿಸಿದರು.

ಜಿಲ್ಲೆಯ ಸವಣೂರು, ಬ್ಯಾಡಗಿ ತಾಲ್ಲೂಕಿನಲ್ಲೂ ರೈತರು ಪ್ರತಿಭಟಿಸಿದ್ದರಿಂದ ಬೀಜ ವಿತರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಶಿಗ್ಗಾವಿಯಲ್ಲಿ ಬೀಜ ವಿತರಣೆ ಆರಂಭಕ್ಕೂ ಮುನ್ನವೇ ನೂಕು ನುಗ್ಗಲು ಉಂಟಾದ ಪರಿಣಾಮ ಬೀಜ ವಿತರಣೆ ಆರಂಭಿಸದೇ ಅನಿರ್ಧಿಷ್ಟಕಾಲ ಮುಂದೂಡಲಾಗಿದೆ. ರಾಣೆಬೆನ್ನೂರ, ಹಾನಗಲ್, ಹಿರೇಕೆರೂರ ತಾಲ್ಲೂಕಿನಲ್ಲಿ ಗದ್ದಲವಿದ್ದರೂ, ಯಾವುದೇ ತೊಂದರೆ ಇಲ್ಲದೇ ವಿತರಣಾ ಕಾರ್ಯ ನಡೆಯಿತು.

ಪೊಲೀಸರ ಭದ್ರತೆಯಲ್ಲಿ ವಿತರಣೆ
ಕೊಟ್ಟೂರು: ಕನಕ ಹತ್ತಿ ಬೀಜ ಖರೀದಿಸಲು ಮಂಗಳವಾರ ಇಲ್ಲಿ ಸಾವಿರಾರು ರೈತರು ಸೇರಿದ್ದರಿಂದ, ಪೊಲೀಸ್ ಬಂದೋಬಸ್ತ್‌ನಲ್ಲಿ ಬೀಜ ವಿತರಣೆ ಮಾಡಲಾಯಿತು. ಲಭ್ಯವಿದ್ದ 1,400 ಹತ್ತಿ ಬೀಜದ ಪ್ಯಾಕೇಟ್‌ಗಾಗಿ ಸುಮಾರು 5,000  ರೈತರು ಸಾಲಿನಲ್ಲಿ ನಿಂತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
 





 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.