
ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕನ್ನಡದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ನಡೆಸಬೇಕೆಂದು ಚರ್ಚೆ ನಡೆಯುತ್ತಿದೆ. ಆದರೆ, 24 ವರ್ಷದ ಹಿಂದೆ ಆರಂಭವಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನೇ ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ನಡೆಸಲು ಸರ್ಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ.
ವೃತ್ತಿಪರ ಕೋರ್ಸ್‌ಗಳ ಪರೀಕ್ಷೆ ಮೂರು ವರ್ಷ ಪ್ರಾದೇಶಿಕ ಭಾಷೆಗಳಲ್ಲಿ ನಡೆದಿದ್ದರೆ ಮಾತ್ರ ಎನ್‌ಇಇಟಿ ಪರೀಕ್ಷೆ ನಡೆಸಲು ಅವಕಾಶವಿದೆ. ಆದರೆ, 1993ರಿಂದ ಸಿಇಟಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕನ್ನಡದಲ್ಲಿ ಪರೀಕ್ಷೆ ನಡೆಸಲು ಕಾಳಜಿ ತೋರಿಲ್ಲ.
ಆದರೆ, 2006ರಲ್ಲಿ ಒಮ್ಮೆ ಮಾತ್ರ ಕನ್ನಡದಲ್ಲೂ ಸಿಇಟಿ ಪರೀಕ್ಷೆ ನಡೆಸುವ ಪ್ರಯತ್ನ ಮಾಡಲಾಗಿತ್ತು. ಆಗ 16 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಅನಂತರ ಸರ್ಕಾರ ಅದನ್ನು ಮುಂದುವರಿಸಲಿಲ್ಲ.
‘ಕನ್ನಡ ಪಠ್ಯಪುಸ್ತಕಗಳು ಸಿಗದೆ ಇರುವುದರಿಂದ ಮತ್ತು ಕನ್ನಡ ಬೋಧನೆ ಇಲ್ಲದಿರುವುದರಿಂದ ಇಂಗ್ಲಿಷ್‌ನಲ್ಲಿ ಬರೆಯುವುದೇ ಸುಲಭ ಎಂಬುದು ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯ’ ಎಂದು ಕೆಇಎ ನಿವೃತ್ತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿ ಬಾರಿ ಸಿಇಟಿ ಶುಲ್ಕ ಪಾವತಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿವರದ ಜೊತೆಗೆ ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯುತ್ತೀರಿ ಎಂಬ ಅಂಶವನ್ನೂ ಕೇಳಲಾಗುತ್ತದೆ. ಆಗ ಒಬ್ಬ ವಿದ್ಯಾರ್ಥಿಯೂ ‘ಕನ್ನಡ’ ಎಂದು ನಮೂದಿಸುವುದಿಲ್ಲ ಎಂದು ಅವರು ಹೇಳಿದರು.
ಈಗ ಮತ್ತೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದ್ದು, ಇದಕ್ಕೆ ಪೂರಕವಾಗಿ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.
ಕನ್ನಡದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾದರೆ ಪೂರಕ ಪಠ್ಯವಸ್ತು ಕನ್ನಡದಲ್ಲಿ ಲಭ್ಯ ಇರಬೇಕು ಮತ್ತು ಕಾಲೇಜುಗಳಲ್ಲಿ ಕನ್ನಡದಲ್ಲೇ ಬೋಧನೆ ಮಾಡಬೇಕು.
2017–18ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಿಸಿಎಂಬಿ (ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವ ವಿಜ್ಞಾನ) ವಿಷಯಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಪಠ್ಯಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇಂಗ್ಲಿಷ್‌ನಲ್ಲಿರುವ ಈ ಪಠ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಮುಂದಿನ ಶೈಕ್ಷಣಿಕ ವರ್ಷ ಆರಂಭ ಆಗುವುದರೊಳಗೆ ಈ ಪಠ್ಯಗಳ ಭಾಷಾಂತರ ಪೂರ್ಣಗೊಂಡರೆ ವಿಜ್ಞಾನ ಕೋರ್ಸ್‌ಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.
2012–13ರಲ್ಲಿ ವಿಜ್ಞಾನ ವಿಷಯಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಹಂಪಿ ಕನ್ನಡ ವಿಶ್ವವಿದ್ಯಾಲಯದೊಂದಿಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಭಾಷಾಂತರಕ್ಕೆ ದರ ನಿಗದಿ ಮಾಡುವ ಸಂಬಂಧ ಗೊಂದಲ ಉಂಟಾಗಿ ಈ ಯೋಜನೆ ಕೈಗೂಡಲಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಕೇಂದ್ರದಿಂದ ತಾರತಮ್ಯ: ಕೇರಳ ಆಕ್ಷೇಪ
ಕೊಚ್ಚಿ (ಪಿಟಿಐ): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ಮಲಯಾಳಂ ಭಾಷೆಯಲ್ಲಿ ಬರೆಯಲು ಅವಕಾಶ ನೀಡದೆ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.
‘ಇದು ಕೇರಳದ ಜನರಿಗೆ ಮಾಡಿರುವ ಅನ್ಯಾಯ. ಈ ವಿಚಾರದ ಕುರಿತು ಕೂಡಲೇ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕು’ ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
‘ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ನೀಡುವ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಆದರೆ, ಇವುಗಳಲ್ಲಿ ಮಲಯಾಳಂ ಮತ್ತು ಕನ್ನಡವನ್ನು ಸೇರಿಸಿಲ್ಲ. ಇದು ತಾರತಮ್ಯ ನೀತಿಯಾಗಿದೆ. ಈ ಎರಡೂ ಭಾಷೆಗಳನ್ನು ಸೇರ್ಪಡೆಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ನಮ್ಮಿಂದ ಲೋಪ ಆಗಿಲ್ಲ: ಸಿ.ಎಂ
ಹುಬ್ಬಳ್ಳಿ: ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲೇ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿದ್ದ ವಿಡಿಯೊ ಸಂವಾದದ ಸಂದರ್ಭದಲ್ಲಿ ರಾಜ್ಯದ ಅಧಿಕಾರಿಗಳು ಹೇಳಿದ್ದರು. ಆದರೂ ಕೇಂದ್ರ ಸರ್ಕಾರ ಕನ್ನಡವನ್ನು ಕೈಬಿಟ್ಟಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಆಕ್ಷೇಪಿಸಿದರು.
‘ಈ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಲೋಪ ಆಗಿಲ್ಲ’ ಎಂದರು.
ಮುಖ್ಯಾಂಶಗಳು
* ವಿಜ್ಞಾನ ಪಠ್ಯಗಳು ಕನ್ನಡದಲ್ಲಿ ಇಲ್ಲ
* ಎನ್‌ಸಿಇಆರ್‌ಟಿ ಪಠ್ಯಗಳ ಭಾಷಾಂತರಕ್ಕೆ ಈ ತಿಂಗಳು ಹೊರಟ ಆದೇಶ
* ಕನ್ನಡದಲ್ಲಿ ಬರೆಯಲು ವಿದ್ಯಾರ್ಥಿಗಳ ನಿರಾಸಕ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.