ADVERTISEMENT

ಕನ್ನಡ ತಂತ್ರಾಂಶ: ಸರ್ಕಾರದ ಧೋರಣೆ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 20:10 IST
Last Updated 8 ಸೆಪ್ಟೆಂಬರ್ 2013, 20:10 IST
ಬೆಂಗಳೂರಿನಲ್ಲಿ ಭಾನುವಾರ ನಡೆದ `ಕೆ.ಪಿ.ಪೂರ್ಣಚಂದ್ರ ತೇಜಸ್ವಿ-75' ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ತೇಜಸ್ವಿ ಅವರ ಸಮಗ್ರ ಕೃತಿ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಚಿತ್ರದಲ್ಲಿದ್ದಾರೆ
ಬೆಂಗಳೂರಿನಲ್ಲಿ ಭಾನುವಾರ ನಡೆದ `ಕೆ.ಪಿ.ಪೂರ್ಣಚಂದ್ರ ತೇಜಸ್ವಿ-75' ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ತೇಜಸ್ವಿ ಅವರ ಸಮಗ್ರ ಕೃತಿ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಚಿತ್ರದಲ್ಲಿದ್ದಾರೆ   

ಬೆಂಗಳೂರು: `ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಪಡಿಸಿದರೆ ಮಾತ್ರ ನಮ್ಮ ಭಾಷೆ ಉದ್ದಾರ ಆಗುತ್ತದೆ ಎಂಬುದು ಪೂರ್ಣಚಂದ್ರ ತೇಜಸ್ವಿ ಅವರ ವಾದವಾಗಿತ್ತು. ತಂತ್ರಾಂಶ ಅಳವಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಘೋಷಿಸಿದ ಮಾತ್ರಕ್ಕೇ ಕೆಲಸ ಆಗುವುದಿಲ್ಲ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್, ಭಾರತ ಯಾತ್ರಾ ಕೇಂದ್ರ, ಮೂಡಿಗೆರೆಯ ವಿಸ್ಮಯ ಪ್ರತಿಷ್ಠಾನ, ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆಯ ಆಶ್ರಯದಲ್ಲಿ ಚಿತ್ರಕಲಾ ಪರಿಷತ್ ಆವರಣದಲ್ಲಿ ಭಾನುವಾರ ನಡೆದ `ಕೆ.ಪಿ.ಪೂರ್ಣಚಂದ್ರ ತೇಜಸ್ವಿ-75' ಕಾರ್ಯಕ್ರಮದಲ್ಲಿ ತೇಜಸ್ವಿ ಅವರ `ಕಾಡು ಮತ್ತು ಕ್ರೌರ್ಯ' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಸಮ್ಮೇಳನಗಳನ್ನು, ಚರ್ಚಾಗೋಷ್ಠಿಗಳನ್ನು ನಡೆಸಿದ ಮಾತ್ರಕ್ಕೆ ಭಾಷೆ ಬೆಳೆಯುವುದಿಲ್ಲ ಎಂದು ತೇಜಸ್ವಿ ಪ್ರತಿಪಾದಿಸಿದ್ದರು. ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಆಶಿಸಿದ್ದರು. ಅವರು ಎಂದೂ ಸಚಿವರ ಮನೆಗೆ ಹೋದವರಲ್ಲ. ತಂತ್ರಾಂಶ ಅಳವಡಿಕೆ ಸಂಬಂಧ ಸಚಿವರ ಮನೆಗೆ ನಾನು ಮತ್ತು ತೇಜಸ್ವಿ ಹೋದಾಗ ಕಂಬಳದ ಕೋಣದ ರೀತಿಯಲ್ಲಿ ನಿಲ್ಲಿಸಿ ಛಾಯಾಚಿತ್ರ ತೆಗೆಸಿಕೊಂಡರು. ದೊಡ್ಡ ತಜ್ಞರಾದ ಚಿದಾನಂದ ಗೌಡ ಅವರನ್ನು ಹಾಗೂ ಅವರ ಶೋಧವನ್ನು ಅನುಮಾನದಿಂದ ನೋಡುವ ಅಧಿಕಾರಿಗಳು ಇದ್ದಾರೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಕನ್ನಡದ ಬಗೆಗೆ ವರ್ಣನೆ ಹಾಗೂ ವೈಭವೀಕರಣ ಮಾಡಿದ ಅನೇಕ ಸಾಹಿತಿಗಳು ಇದ್ದಾರೆ. ಆದರೆ, ಬಸವಣ್ಣ, ಕುವೆಂಪು ಹಾಗೂ ತೇಜಸ್ವಿ ಅವರು ಕನ್ನಡವನ್ನು ಉಳಿಸುವ ಅಗತ್ಯವನ್ನು ಹೇಳಿದ್ದರು. ಬಸವಣ್ಣ ನೇತೃತ್ವದ ವಚನ ಚಳವಳಿಕಾರರು `ಅನ್ಯರ ಬಾವಿಯ ಸಿಹಿನೀರಿಗಿಂತ ನಮ್ಮ ಮನೆಯ ಉಪ್ಪು ನೀರೇ ಲೇಸು' ಎಂದು ಭಾವಿಸಿದ್ದರು. ಕನ್ನಡದಲ್ಲೇ ಆಧ್ಯಾತ್ಮಿಕ ವಿಚಾರಗಳ ಅಭಿವ್ಯಕ್ತಿ ಮಾಡಿ ಶ್ರೇಷ್ಠ ವಚನ ಸಾಹಿತ್ಯವನ್ನು ನಿರ್ಮಾಣ ಮಾಡಿದರು' ಎಂದು ಅವರು ಸ್ಮರಿಸಿದರು.

ಹಿರಿಯ ಪತ್ರಕರ್ತ ನಾಗೇಶ ಹೆಗಡೆ, `ತೇಜಸ್ವಿ ಅವರನ್ನು ಹವಾಮಾನ ಬದಲಾವಣೆ, ಜಾಗತೀಕರಣದಿಂದ ಪರಿಣಾಮದಿಂದ ಅಸಾಧ್ಯ ಕೊಳ್ಳುಬಾಕ ಸಂಸ್ಕೃತಿ, ಹಳ್ಳಿಗಳು ಖಾಲಿ ಆಗುತ್ತಿರುವ ಸಂಗತಿ ತೀವ್ರವಾಗಿ ಕಾಡಿತ್ತು. ಈ ಮೂರು ವಿಷಯಗಳು ಇಡೀ ಜಗತ್ತನ್ನು ವಿಲಕ್ಷಣ ಸಂಕಟದ ಕಡೆಗೆ ಕೊಂಡೊಯ್ಯುತ್ತಿವೆ. ಹಳ್ಳಿಗಳಲ್ಲಿ ಇರುವ ತಳಮಟ್ಟದ ಸಮುದಾಯಕ್ಕೆ ಪರಿಸರದ ಸಂಕಟಗಳನ್ನು ಹೇಳಬೇಕಿದೆ' ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಗೃಹ ಸಚಿವ ಕೆ.ಜೆ.ಜಾರ್ಜ್, ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಉಪಸ್ಥಿತರಿದ್ದರು. ಈ ಸಂದರ್ಭ `ವಿಶ್ವ ಪರಿಸರ ದಿನ' ಕೈಪಿಡಿಗಳ ಬಿಡುಗಡೆ ಮಾಡಲಾಯಿತು.   `ಕಾಡು ಮತ್ತು ಕ್ರೌರ್ಯ' ತೇಜಸ್ವಿ ಅವರ ಮೊದಲ ಕಾದಂಬರಿ. ಮೈಸೂರಿನ ಪುಸ್ತಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಬೆಲೆ: 120 ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.