
ಬೆಳಗಾವಿ: ಇಲ್ಲಿನ ಶಹಾಪುರದಲ್ಲಿರುವ ಹಿರಿಯ ಕನ್ನಡ ಪ್ರಾಥಮಿಕ ಸರ್ಕಾರಿ ಶಾಲೆ ನಂ.17ರ ಕೊಠಡಿಯೊಂದಕ್ಕೆ ಕಿಡಿಗೇಡಿಗಳು ಭಾನುವಾರ ಮಧ್ಯರಾತ್ರಿ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಕೊಠಡಿಯೊಳಗೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿದ್ದ ಪುಸ್ತಕ, ದಾಖಲೆ ಪತ್ರಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯ ಝಳಕ್ಕೆ ಗೋಡೆ, ಕಿಟಕಿ, ಬಾಗಿಲು ಕರಕಲಾಗಿವೆ.
ಶಹಾಪುರ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಹೊಂದಿಕೊಂಡಂತೆ ಶಾಲೆ ಇದ್ದರೂ ಈ ಘಟನೆ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಶಿಕ್ಷಕರು ಶಾಲೆಗೆ ಬಂದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ನಗರ ವಲಯ ಬಿಇಓ ಬಸವರಾಜ ನಾಲತವಾಡ, ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಶಾಲೆಯ 7ನೇ ತರಗತಿಯ ಕೊಠಡಿಯೊಳಗೆ ರಾತ್ರಿ ನುಗ್ಗಿದ ಕಿಡಿಗೇಡಿಗಳು ಅಲ್ಲಿದ್ದ ಪಠ್ಯಪುಸ್ತಕಗಳು, ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ, ಆರೋಗ್ಯ ತಪಾಸಣೆ ಕಾರ್ಡ್, ಪ್ರಾಜೆಕ್ಟ್ ವರದಿಗಳಿಗೆ ಬೆಂಕಿ ಹಚ್ಚಿ, ಸುಟ್ಟುಹಾಕಿದ್ದಾರೆ’ ಎಂದು ಮುಖ್ಯ ಅಧ್ಯಾಪಕಿ ಶೈಲಜಾ ಕುಕನೂರ ತಿಳಿಸಿದರು.
‘ದುಷ್ಕರ್ಮಿಗಳು ಯಾರು? ಶಾಲೆಯೊಳಗೆ ಹೇಗೆ ಪ್ರವೇಶಿಸಿದರು? ಯಾವುದಾದರೂ ದಾಖಲೆಗಳನ್ನು ಹೊತ್ತೊಯ್ದಿದ್ದಾರೆಯೇ? ಮುಂತಾದ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದೇವೆ. ತನಿಖೆ ಪೂರ್ಣಗೊಳಿಸಿದ ನಂತರ ವಿವರ ನೀಡಲಾಗುವುದು’ ಎಂದು ಸಿಪಿಐ ಡಿ.ಸಿ. ಲಕ್ಕನ್ನವರ ಸುದ್ದಿಗಾರರಿಗೆ ತಿಳಿಸಿದರು.
ಮರಾಠಿಗರ ಪ್ರಾಬಲ್ಯ: ‘ಮರಾಠಿಗರ ಪ್ರಾಬಲ್ಯ ಹೆಚ್ಚಾಗಿರುವ ಈ ಪ್ರದೇಶದಲ್ಲಿ 1967ರಲ್ಲಿ ಈ ಶಾಲೆ ಆರಂಭಗೊಂಡಿತ್ತು. ಅಂದಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಶಾಲೆಯ ಆಸ್ತಿಪಾಸ್ತಿಗೆ ದುಷ್ಕರ್ಮಿಗಳು ಹಾನಿ ಉಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಶಾಲಾ ಸಿಬ್ಬಂದಿಯೊಬ್ಬರು ತಿಳಿಸಿದರು.
‘ಎಂ.ಇ.ಎಸ್ ಹಾವಳಿ ಹೆಚ್ಚಾಗಿದೆ’ (ಹಾವೇರಿ ವರದಿ): ‘ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಪುಂಡರ ಹಾವಳಿ ಹೆಚ್ಚಾಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಮರಾಠಿ, ತಮಿಳು, ತೆಲುಗು, ಉರ್ದು ಶಾಲೆಗಳು ಇದ್ದು, ಕನ್ನಡಿಗರು ಸಹ ಇದೇ ರೀತಿ ದಾಳಿ ಮಾಡಿದರೆ ರಾಜ್ಯದ ಏಕತೆಗೆ ಧಕ್ಕೆಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಎಂ.ಇ.ಎಸ್ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.