ADVERTISEMENT

ಕನ್ನಡ ಸಮ್ಮೇಳನ: ವಸತಿ ಸೌಲಭ್ಯಕ್ಕೆ ಆದ್ಯತೆ

ವಿವಿಧೆಡೆಯಿಂದ ಬರುವ ವಿಶೇಷ ಆಹ್ವಾನಿತರು, ಪ್ರತಿನಿಧಿಗಳಿಗೆ 14 ಸಾವಿರ ಕೊಠಡಿ ಸೌಲಭ್ಯ

ನೇಸರ ಕಾಡನಕುಪ್ಪೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ಕನ್ನಡ ಸಮ್ಮೇಳನ: ವಸತಿ ಸೌಲಭ್ಯಕ್ಕೆ ಆದ್ಯತೆ
ಕನ್ನಡ ಸಮ್ಮೇಳನ: ವಸತಿ ಸೌಲಭ್ಯಕ್ಕೆ ಆದ್ಯತೆ   

ಮೈಸೂರು: ನವೆಂಬರ್‌ನಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳು, ವಿಶೇಷ ಆಹ್ವಾನಿತರು, ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದನ್ನು ಆದ್ಯತೆಯನ್ನಾಗಿ ಸ್ವೀಕರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ನಗರದ ವಿವಿಧೆಡೆ 14 ಸಾವಿರ ಕೊಠಡಿಗಳನ್ನು ಕಾಯ್ದಿರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ನ. 24, 25, 26ರಂದು ಸಮ್ಮೇಳನ ನಡೆಯಲಿದ್ದು, ವಿವಿಧ ಭಾಗಗಳಿಂದ ಸಾಹಿತ್ಯಾಭಿಮಾನಿಗಳು ಭಾಗವಹಿಸುತ್ತಾರೆ. ಪಾಲ್ಗೊಳ್ಳುವ ಅತಿಥಿಗಳು ಹಾಗೂ ಪ್ರತಿನಿಧಿಗಳೇ ಈ ಬಾರಿ 14 ಸಾವಿರ ಮಂದಿ ಇದ್ದು, ವಸತಿ ಸೌಲಭ್ಯ ನೀಡಲು ಸ್ಥಳ ಗುರುತಿಸಲಾಗಿದೆ. ವಿವಿಧ ಹೋಟೆಲ್‌ಗಳು, ವಿದ್ಯಾರ್ಥಿನಿಲಯಗಳು, ಅತಿಥಿಗೃಹಗಳನ್ನು ಕಾಯ್ದಿರಿಸಲಾಗುತ್ತಿದೆ.

ಜಿಲ್ಲೆಗಳಿಂದ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳ ನೋಂದಣಿ ಕಾರ್ಯ ಈಗಾಗಲೇ ಆರಂಭವಾಗಿದ್ದು, ನ. 10ಕ್ಕೆ ಮುಗಿಯಲಿದೆ. ಒಟ್ಟಾರೆಯಾಗಿ ಎಲ್ಲಾ ಜಿಲ್ಲೆಗಳಿಂದ 12 ಸಾವಿರ ಪ್ರತಿನಿಧಿಗಳು ನೋಂದಣಿಯಾಗುವ ಗುರಿಯಿದೆ. ಜತೆಗೆ ದೇಶದ ವಿವಿಧ ಭಾಗಗಳಿಂದ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು 300 ಮಂದಿ ಇರಲಿದ್ದಾರೆ. 175 ತಾಲ್ಲೂಕುಗಳಿಂದ ವಿಶೇಷ ಆಹ್ವಾನಿತರಾಗಿ ತಲಾ ಐವರು (ಒಟ್ಟು 875) ಭಾಗವಹಿಸಲಿದ್ದಾರೆ. ಕಸಾಪ ವಿವಿಧ ಜಿಲ್ಲಾ ಘಟಕಗಳ 2,000 ಪ್ರತಿನಿಧಿಗಳು ಬರುತ್ತಿದ್ದಾರೆ. ಇವರೆಲ್ಲರಿಗೂ ವಸತಿ ಸೌಕರ್ಯ ನೀಡಿದರೆ ಅಂತಿಮ ಕ್ಷಣದಲ್ಲಿ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾ ಕಸಾಪ ಮುಖಂಡರು ಹೇಳುತ್ತಾರೆ.

ADVERTISEMENT

ವಸತಿ, ಊಟ, ಅತಿಥಿ ಸತ್ಕಾರ ಹಾಗೂ ಮೆರವಣಿಗೆಯ ಜವಾಬ್ದಾರಿ ಜಿಲ್ಲಾ ಘಟಕಕ್ಕೆ ಸಿಕ್ಕಿದೆ. ಪ್ರತಿನಿಧಿಗಳಲ್ಲಿ ಮಹಿಳೆಯರು ಹಾಗೂ ಪುರುಷರ ಸಂಖ್ಯೆಯನ್ನು ಆಧರಿಸಿ ವಿವಿಧ ವಿದ್ಯಾರ್ಥಿನಿಲಯಗಳು ಹಾಗೂ ವಸತಿಗೃಹಗಳನ್ನು ಕಾಯ್ದಿರಿಸಲಾಗುವುದು. ಮಹಿಳೆಯರಿಗೆ ಮಹಿಳಾ ವಿದ್ಯಾರ್ಥಿನಿಲಯಗಳಲ್ಲಿ ವಸತಿ ನೀಡಲಾಗುವುದು. ಇದಕ್ಕಾಗಿ ನಗರದ ವಿವಿಧ ವಿದ್ಯಾರ್ಥಿನಿಲಯಗಳನ್ನು ಸಂಪರ್ಕಿಸಲಾಗುವುದು. ಪುರುಷ ಪ್ರತಿನಿಧಿಗಳಿಗೆ ವಸತಿಗೃಹಗಳಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೇ, ಅತಿಥಿಗಳಲ್ಲಿ ಗಣ್ಯರನ್ನು ಗುರುತಿಸಿ ಅವರಿಗೆ ವಿಶೇಷವಾದ ಆತಿಥ್ಯ ನೀಡಲಾಗುವುದು. ಉತ್ತಮ ಹೋಟೆಲ್‌ಗಳಲ್ಲಿ ಅವರಿಗೆ ಸೌಲಭ್ಯ ನೀಡಲಾಗುವುದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡ್ಯ, ಚಾಮರಾಜನಗರಕ್ಕೆ ವಸತಿ ಇಲ್ಲ: ಸಮ್ಮೇಳನದಲ್ಲಿ ಭಾಗವಹಿಸುವ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರತಿನಿಧಿಗಳಿಗೆ ವಸತಿ ಸೌಕರ್ಯ ನೀಡದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಹತ್ತಿರದ ಜಿಲ್ಲೆಗಳಾದ್ದರಿಂದ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲ. ವಸತಿ ವೆಚ್ಚದ ಹೊರೆಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದರು.

ಸಾರಿಗೆ ಸೌಲಭ್ಯ: ಗೋಷ್ಠಿಗಳು ನಡೆಯುವ ವೇದಿಕೆಗಳು ಹಾಗೂ ಪ್ರತಿನಿಧಿಗಳು ಹಾಗೂ ಅತಿಥಿಗಳ ವಸತಿ ಸ್ಥಳಕ್ಕೂ ಸಾರಿಗೆ ಸೌಲಭ್ಯವನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ  200 ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಜತೆಗೆ, ಖಾಸಗಿ ಸಂಸ್ಥೆಗಳಿಂದಲೂ ಬಸ್‌ಗಳನ್ನು ಕೋರಲಾಗಿದೆ. ಖಾಸಗಿ ಸಂಸ್ಥೆಗಳ ಬಸ್‌ಗಳಿಗೆ ಕಸಾಪ ಡೀಸೆಲ್‌ ವೆಚ್ಚ ಭರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.