ADVERTISEMENT

ಕಬಿನಿ ಹಿನ್ನೀರು ಬರಿದು-ವನ್ಯಮೃಗ ತತ್ತರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಹಿನ್ನೀರು ಖಾಲಿಯಾಗಿದ್ದು ಜೀವಜಲ ಅರಸುತ್ತ ಹೊರಟಿರುವ ಕಾಡಾನೆ ಹಿಂಡು. 	ಪ್ರಜಾವಾಣಿ ಚಿತ್ರ/ಎಚ್.ಜಿ. ಪ್ರಶಾಂತ್
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಹಿನ್ನೀರು ಖಾಲಿಯಾಗಿದ್ದು ಜೀವಜಲ ಅರಸುತ್ತ ಹೊರಟಿರುವ ಕಾಡಾನೆ ಹಿಂಡು. ಪ್ರಜಾವಾಣಿ ಚಿತ್ರ/ಎಚ್.ಜಿ. ಪ್ರಶಾಂತ್   

ಮೈಸೂರು: ಸಮೃದ್ಧ ನೀರಿನಿಂದ ತಂಪೆರೆಯುತ್ತಿದ್ದ ಕಬಿನಿ ಹಿನ್ನೀರು ಪ್ರದೇಶದ ನೆಲ ಈಗ ಬಾಯ್ತೆರೆದು ನಿಂತಿದೆ. ಈ ಜೀವಜಲವನ್ನೇ ನೆಚ್ಚಿಕೊಂಡಿದ್ದ ವನ್ಯಜೀವಿಗಳು ಕಂಗಾಲಾಗಿವೆ.

ಎಂದೂ ಬತ್ತದ ಜೀವಸೆಲೆಯೆಂದೇ ಹೆಸರಾಗಿದ್ದ ಕಬಿನಿ ನದಿಯ ಸಣ್ಣ ಹರಿವು ಯಾವಾಗಲೂ ಇದ್ದೇ ಇರುತ್ತದೆ. ಆದರೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ 1974ರಲ್ಲಿ ಜಲಾಶಯ ಕಟ್ಟಿದ ನಂತರ ಹಿನ್ನೀರು ಪ್ರದೇಶ ಈ ರೀತಿ ಒಣಗಿರುವುದು ಇದೇ ಮೊದಲು ಎನ್ನುತ್ತವೆ ಕಾವೇರಿ ನೀರಾವರಿ ನಿಗಮದ ಮೂಲಗಳು.

2284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2247.57 ಅಡಿ ನೀರು ಇದೆ. 19.5 ಟಿಎಂಸಿ ಅಡಿ ನೀರಿನ ಈ ಜಲಾಶಯದಲ್ಲಿ ಸದ್ಯ 3.5 ಟಿಎಂಸಿ ಅಡಿ ನೀರು ಮಾತ್ರ ಇದೆ. ಕೇರಳದಿಂದ ಹರಿದು ಬರುವ ಕಬಿನಿ ನದಿಯಿಂದ ಪ್ರತಿದಿನವೂ ಜಲಾಶಯಕ್ಕೆ 33 ಕ್ಯೂಸೆಕ್ ನೀರಿನ ಒಳಹರಿವು ಇದೆ. ಕಾಡಿನೊಳಗೆ  ಹರಿದು ಬರುತ್ತಿರುವ ಜೀವಸೆಲೆಯೇ ಈಗ ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ತಾಣವಾಗಿದೆ.

ಆದರೆ, ಕಳೆದ ವರ್ಷವಿಡೀ ಕಾಡಿದ ಬರಗಾಲದಿಂದಾಗಿ ಈಗ ಹಿನ್ನೀರು ಪ್ರದೇಶ ನೀರಿಲ್ಲದೇ ಭಣಗುಟ್ಟುತ್ತಿದೆ. ಜಲಾಶಯಕ್ಕೆ ಹಿನ್ನೀರು ಹರಿಯುವ ಮುನ್ನ ಕಡಿದಿದ್ದ ಮರಗಳ ಬುಡಗಳು ಕಾಣುತ್ತಿವೆ. ಆನೆ, ಹುಲಿ, ಜಿಂಕೆ, ಚಿರತೆ, ಕಾಡುಕೋಣ, ಲಂಗೂರ ಮತ್ತು ಅಪರೂಪದ ಪಕ್ಷಿ  ಪ್ರಬೇಧಗಳು ಜೀವಜಲಕ್ಕಾಗಿ ಪರದಾಡುವಂತಾಗಿದೆ.

`ಸದ್ಯ ಕಾಡಿನ ಪ್ರಾಣಿಗಳಿಗೆ ನೀರಿನ ಸಮಸ್ಯೆಯಿಲ್ಲ. ಮಳೆಗಾಲದವರೆಗೂ ಸಾಕಾಗುವಷ್ಟು ನೀರು ಅವುಗಳಿಗೆ ಸಿಗುತ್ತದೆ. ಯಾವುದೇ ಪರ್ಯಾಯ  ವ್ಯವಸ್ಥೆಯ ಕುರಿತು ಈಗಲೇ ಕ್ರಮ ಕೈಗೊಂಡಿಲ್ಲ' ಎಂದು ವಲಯ ಅರಣ್ಯಾಧಿಕಾರಿ ಪೂವಯ್ಯ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಆದರೆ, ಜಲಾಶಯ ನಿರ್ಮಾಣವಾದ ಮೇಲೆ ಹಿನ್ನೀರಿನ ಮೇಲೆಯೇ ವನ್ಯಜೀವಿಗಳು ಸಂಪೂರ್ಣ ಅವಲಂಬಿತವಾಗಿದ್ದವು. ಆದ್ದರಿಂದ ನೀರು, ಆಹಾರ ಹುಡುಕುತ್ತ ಕೆಲವು ಪ್ರಾಣಿಗಳು ಜನವಸತಿ ಪ್ರದೇಶಗಳತ್ತಲೂ ನುಗ್ಗುತ್ತಿವೆ. ಇತ್ತೀಚೆಗಷ್ಟೇ ಪಂಜಹಳ್ಳಿ ಸಮೀಪ ಹುಲಿ ಕಾಣಿಸಿಕೊಂಡಿತ್ತು.

ಪ್ರತಿ ವರ್ಷ ಬಿರುಬೇಸಿಗೆಯಲ್ಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಇಲ್ಲಿಯ ವೃಕ್ಷಸಂಕುಲವೂ ಈಗ ಒಣಗುತ್ತಿದೆ.

ನೆತ್ತಿ ಸುಡುತ್ತಿರುವ ಬಿಸಿಲಿನಲ್ಲಿ ಜಲಕ್ರೀಡೆಯಾಡಿಕೊಂಡಿದ್ದ ಆನೆಗಳು ಈಗ ಹಿನ್ನೀರು ಪ್ರದೇಶದಲ್ಲಿ ನೀರು ಹುಡುಕುತ್ತ ಓಡಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.