ADVERTISEMENT

ಕರಡಿ ಬದಲು ಸಿಂಹ ಸಫಾರಿ

ಮೃಗಾಲಯ ಪ್ರಾಧಿಕಾರಕ್ಕೆ ಪರಿಷ್ಕೃತ ಯೋಜನಾ ವರದಿ ಸಲ್ಲಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST
ಕರಡಿ ಬದಲು ಸಿಂಹ ಸಫಾರಿ
ಕರಡಿ ಬದಲು ಸಿಂಹ ಸಫಾರಿ   

ಹೊಸಪೇಟೆ: ತಾಲ್ಲೂಕಿನ ಬಿಳಿಕಲ್ಲು ಸಂರಕ್ಷಿತ ಅರಣ್ಯ ಪ್ರದೇಶದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ, ಕರಡಿ ಸಫಾರಿ ಬದಲಿಗೆ ಸಿಂಹ ಸಫಾರಿ ಆರಂಭವಾಗಲಿದೆ.

149.50 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಉದ್ಯಾನದಲ್ಲಿ 20 ಹೆಕ್ಟೇರ್‌ ಜಾಗವನ್ನು ಕರಡಿ ಸಫಾರಿಗೆ ಮೀಸಲಿರಿಸಲಾಗಿತ್ತು. ಆದರೆ, ಈಗ ಅದೇ ಪ್ರದೇಶದಲ್ಲಿ ಸಿಂಹ ಸಫಾರಿ ಬರಲಿದೆ.

‘ಉದ್ಯಾನದಿಂದ ಕೆಲವೇ ಕಿ.ಮೀ. ಅಂತರದಲ್ಲಿ ದರೋಜಿ ಕರಡಿಧಾಮವಿದೆ. ಜತೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಈ ಸ್ಥಳದಲ್ಲಿ, ಕರಡಿ ಬದಲಿಗೆ ಸಿಂಹ ಸಫಾರಿಗೆ ನಿರ್ಧರಿಸಲಾಗಿದೆ’ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪುರುಷೋತ್ತಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಬಗ್ಗೆ ತಿಂಗಳ ಹಿಂದೆಯೇ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಅದಕ್ಕೆ ಅವರು ಮೌಖಿಕ ಒಪ್ಪಿಗೆ ನೀಡಿ, ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ಕೇಳಿದ್ದರು. ವರದಿ ಸಿದ್ಧಪಡಿಸಲಾಗಿದ್ದು, ಸೋಮವಾರ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಮುಂದಿನ ತಿಂಗಳು ನಡೆಯಲಿರುವ ಪ್ರಾಧಿಕಾರದ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.

ಉದ್ಯಾನವು ಕುರುಚಲು ಹುಲ್ಲು, ಬೆಟ್ಟ ಗುಡ್ಡಗಳಿಂದ ಕೂಡಿದೆ. ಸಿಂಹ, ಹುಲಿಗಳಿಗೆ ಇದು ಹೇಳಿ ಮಾಡಿಸಿದ ಸ್ಥಳ. ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕ ನಂತರ ಮೈಸೂರು, ಶಿವಮೊಗ್ಗ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಸಿಂಹಗಳನ್ನು ತರಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

2010ರಲ್ಲಿ ಉದ್ಯಾನ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ಈಗಾಗಲೇ ₹ 32 ಕೋಟಿ ವೆಚ್ಚವಾಗಿದ್ದು, ಉದ್ಯಾನಕ್ಕೆ ಸೇರಿದ ಜಾಗಕ್ಕೆ ತಂತಿಬೇಲಿ, ಐದು ಕೆರೆಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಜಿಂಕೆ ಸಫಾರಿಗೆ 30 ಹೆಕ್ಟೇರ್‌ ಹಾಗೂ ಹುಲಿ ಸಫಾರಿಗೆ 20 ಹೆಕ್ಟೇರ್‌ ಜಾಗವನ್ನು ಗುರುತಿಸಿ, ತಂತಿ ಬೇಲಿ ಹಾಕಲಾಗಿದೆ.‘ಇಂದಿರಾ ಪ್ರಿಯದರ್ಶಿನಿ’ ಜಿಂಕೆ ಸಫಾರಿಗೆ 2017ರ ನ.3ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅಲ್ಲಿ 80 ಜಿಂಕೆ, 87 ಕೃಷ್ಣಮೃಗಗಳಿವೆ. ಹುಲಿ, ಸಿಂಹಗಳೂ ಬಂದರೆ ಪೂರ್ಣ ಪ್ರಮಾಣದಲ್ಲಿ ಉದ್ಯಾನ ಕಾರ್ಯಾರಂಭ ಮಾಡಲಿದೆ. ಸದ್ಯ ಜಿಂಕೆ ಸಫಾರಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.