ADVERTISEMENT

ಕರಾಳ ಅಧ್ಯಾಯ: ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದನ್ನು ಕರಾಳ ಎಂದು ಬಣ್ಣಿಸಿರುವ ಬಿಜೆಪಿ ಶನಿವಾರ ರಾಜ್ಯ ಬಂದ್‌ಗೆ ಕರೆ ನೀಡಿದೆ.ರಾಜ್ಯಪಾಲರ ಆದೇಶ ಹೊರ ಬಿದ್ದ ತಕ್ಷಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ತುರ್ತು ಸಭೆ ನಡೆಸಿದರು.ನಂತರ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯಪಾಲರ ಕ್ರಮವನ್ನು ಖಂಡಿಸಿ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಜೀವ ನೀಡುವ ಉದ್ದೇಶದಿಂದ ರಾಜ್ಯಪಾಲರು ಈ ಕ್ರಮ ತೆಗೆದುಕೊಂಡಿದ್ದಾರೆ. ಇಂತಹ ರಾಜ್ಯಪಾಲರನ್ನು ಈ ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಯವರನ್ನೂ ಆಗ್ರಹಿಸಲಾಗುವುದು. ಇನ್ನು ಮುಂದೆ ‘ರಾಜ್ಯಪಾಲ ಹಠಾವೋ’ ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದರು.

ರಾಜ್ಯಪಾಲರೇ ತಮಗೆ ಬೇಕಾದ ಇಬ್ಬರು ವಕೀಲರಿಂದ ಅರ್ಜಿ ಹಾಕಿಸಿಕೊಂಡು, ಈ ತೀರ್ಮಾನ  ತೆಗೆದುಕೊಂಡಿದ್ದಾರೆ. ಅದೂ ಇನ್ನೂ ಅನೇಕ ದಾಖಲೆಗಳನ್ನು ರಾಜಭವನಕ್ಕೆ ನೀಡುವುದು ಬಾಕಿ ಇದ್ದ ಸಂದರ್ಭದಲ್ಲೇ ಈ ಆದೇಶ ನೀಡಿರುವುದು ಸರಿಯಲ್ಲ ಎಂದು ಹೇಳಿದರು.

ರಾಜಕೀಯ ಪ್ರೇರಿತ: ರಾಜ್ಯಪಾಲರ ಈ ಕ್ರಮ ರಾಜಕೀಯ ಪ್ರೇರಿತ ಎಂದು ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ತೀರ್ಮಾನದ ವಿರುದ್ಧ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದು ಹೇಳಿದರು.

ಪ್ರಮುಖರ ಸಭೆ: ಇದಕ್ಕೂ ಮುನ್ನ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಕ್ಷದ ಪ್ರಮುಖರು ಮತ್ತು ಪದಾಧಿಕಾರಿಗಳ ಸಭೆಯಲ್ಲೂ ರಾಜ್ಯಪಾಲರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಯಿತು.ಪ್ರಸ್ತುತ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಇದರಿಂದ ಹೇಗೆ ಪಾರಾಗಬೇಕು ಎಂಬುದರ ಬಗ್ಗೆ ಅಗತ್ಯ ಸಲಹೆ ಪಡೆದು ಕಾನೂನು ಹೋರಾಟಕ್ಕೆ ಸಿದ್ಧರಾಗಿ ಎನ್ನುವ ಸಂದೇಶವನ್ನೂ ಸಭೆ ಮುಖ್ಯಮಂತ್ರಿಗೆ ನೀಡಿತು. ಈ ನಡುವೆ ಮುಖ್ಯಮಂತ್ರಿ ಅವರಿಗೆ ಪೂರ್ಣ ಬೆಂಬಲವಾಗಿ ನಿಲ್ಲಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ.

ಈ ಸಭೆಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರ ಜತೆ ಮಾತನಾಡಿ, ‘ಕಳ್ಳನೇ ಪೊಲೀಸರನ್ನು ದೂರಿದಂತೆ’ ಎಂದು ಬುಧವಾರದ ಸಂಪುಟ ಸಭೆಯ ತೀರ್ಮಾನದ ಬಗ್ಗೆ ರಾಜ್ಯಪಾಲರು ಲಘುವಾಗಿ ಮಾತನಾಡುವುದರ ಮೂಲಕ ಐದು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಅವರು ರಾಜ್ಯದ ಜನತೆಯ ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಪಡಿಸಿದರು.

ಇದೇ ಮೊದಲ ಬಾರಿಗೆ ರಾಜ್ಯಪಾಲರ ವಿರುದ್ಧ ಬಹಿರಂಗ ಸಮರಕ್ಕೆ ಇಳಿದಿರುವ ಅವರು ಜ.24ರಂದು ಬಿಜೆಪಿಯ ಎಲ್ಲ ಸಂಸದರು ಮತ್ತು ಪಕ್ಷದ ರಾಷ್ಟ್ರೀಯ ಮುಖಂಡರು ರಾಷ್ಟ್ರಪತಿಯನ್ನು ಭೇಟಿ ಮಾಡಿ ದೂರು ನೀಡಲಿದ್ದಾರೆ ಎಂದು ಹೇಳಿದರು.

ಈ ನಡುವೆ ಪದಾಧಿಕಾರಿಗಳ ಸಭೆ ನಂತರ ಪಕ್ಷದ ವಕ್ತಾರ ಆಯನೂರು ಮಂಜುನಾಥ್ ಸುದ್ದಿಗಾರರ ಜತೆ ಮಾತನಾಡಿ, ‘ರಾಜ್ಯಪಾಲರ ಹಠಾವೋ’ ಚಳವಳಿಯನ್ನು ರಾಜ್ಯದಾದ್ಯಂತ ತೀವ್ರಗೊಳಿಸುವುದಾಗಿ ಹೇಳಿದರು.

ಬಂದ್ ನಡುವೆಯೂ ಬಿಜೆಪಿ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆಗೆ ಕರೆ ನೀಡಿದೆ. ಜ.25ರಂದು ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ರಾಜ್ಯಪಾಲರನ್ನು ‘ಕನ್ನಡಿಗರ ದ್ರೋಹಿ’ ಎಂದೂ ಟೀಕಿಸಿದ ಮಂಜುನಾಥ್ ಅವರು ‘ರಾಜ್ಯಪಾಲರ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಆದರೆ ಈ ಭಾರದ್ವಾಜ್ ಅವರಿಗೆ ಅಲ್ಲ. ಇವರು ಸಂವಿಧಾನ, ಬದಲಿಗೆ ರಾಜಕಾರಣ ಮಾಡಲು ಬಂದಿದ್ದಾರೆ’ ಎಂದು ನೇರ ವಾಗ್ದಾಳಿ ನಡೆಸಿದರು.

‘ರಾಜ್ಯಪಾಲರ ಸ್ಥಾನದ ಘನತೆ, ಗಾಂಭೀರ್ಯ ಮತ್ತು ಪಾವಿತ್ರ್ಯವನ್ನು ಅರ್ಥ ಮಾಡಿಕೊಳ್ಳದ ಭಾರದ್ವಾಜ್ ಅವರು  ಅದನ್ನು ಅಪವಿತ್ರಗೊಳಿಸಿದ್ದಾರೆ. ನಮ್ಮ ಹೋರಾಟ ಏನಿದ್ದರೂ ವ್ಯಕ್ತಿ ವಿರುದ್ಧವೇ ಹೊರತು ಸ್ಥಾನದ ವಿರುದ್ಧ ಅಲ್ಲ’ ಎಂದು ಸ್ಪಷ್ಟಪಡಿಸಿದರು.


‘ಬೊಫೋರ್ಸ್ ಹಗರಣದ ಪ್ರಮುಖ ಆರೋಪಿ ಕ್ವಟ್ರೋಚಿ ವಿದೇಶಕ್ಕೆ ಪರಾರಿಯಾಗದಂತೆ ತಡೆದಿದ್ದ ಸಂದರ್ಭದಲ್ಲಿ ಇದೇ ಭಾರದ್ವಾಜ್ ಕೇಂದ್ರದ ಕಾನೂನು ಸಚಿವರು. ಕ್ವಟ್ರೋಚಿ ಓಡಿ ಹೋಗಲು ಇವರ ಕೊಡುಗೆಯೂ ಇದೆ. ಇಂತಹವರು ಈಗ ನೀತಿ ಪಾಠ ಹೇಳುತ್ತಿದ್ದಾರೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

‘ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ನ್ಯಾಯಮೂರ್ತಿ ರಂಗವಿಠಲಾಚಾರ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿ ಆಗಿನ ಕುಲಪತಿ ಪ್ರೊ ಶಶಿಧರ್‌ಪ್ರಸಾದ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ಆದರೆ, ಈ ಸಮಿತಿಯ ವರದಿ ಅನುಷ್ಠಾನಕ್ಕೆ ಇದೇ ರಾಜ್ಯಪಾಲರು ತಡೆ ನೀಡಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಯಾರು ಕಳ್ಳ, ಯಾರು ಪೊಲೀಸ್ ಎನ್ನುವುದು ಜನರಿಗೆ ಅರ್ಥವಾಗುತ್ತದೆ’ ಎಂದು ತಿರುಗೇಟು ನೀಡಿದರು.

ಸಂಪುಟ ಸಭೆ ದಿಢೀರ್ ರದ್ದು
ರಾಜ್ಯಪಾಲರ ವಿರುದ್ಧ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಸಲುವಾಗಿ ಶನಿವಾರ ಕರೆದಿದ್ದ ತುರ್ತು ಸಂಪುಟ ಸಭೆಯನ್ನು ದಿಢೀರ್ ರದ್ದು ಮಾಡಲಾಗಿದೆ.ರಾಜ್ಯಪಾಲರ ವಿರುದ್ಧ ಸರ್ಕಾರವೇ ಹೋರಾಟ ನಡೆಸುವುದು ಸರಿಯಲ್ಲ. ಹೀಗಾಗಿ ಸಂಪುಟ ಸಭೆಯಲ್ಲಿ ಅವರ ವಿರುದ್ಧ ಯಾವ ತೀರ್ಮಾನ ತೆಗೆದುಕೊಳ್ಳುವುದೂ ಬೇಡ ಎಂದು ಪಕ್ಷದ ಹೈಕಮಾಂಡ್ ಸೂಚನೆ ನೀಡಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸಂಪುಟ ಸಭೆಯನ್ನು ರದ್ದು ಮಾಡಿದರು.

ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಯಲಿ. ಅದು ಬಿಟ್ಟು ಸರ್ಕಾರ ಪ್ರತಿಭಟನೆಯಲ್ಲಿ ಭಾಗವಹಿಸುವುದು ಬೇಡ. ಈ ವಿಷಯದಲ್ಲಿ ಮುಖ್ಯಮಂತ್ರಿಯವರು ರಾಷ್ಟ್ರಪತಿಗೂ ಪತ್ರ ಬರೆಯುವುದು ಬೇಡ. ಆ ಕೆಲಸವನ್ನು ಪಕ್ಷವೇ ಮಾಡಲಿ ಎಂದ ಪಕ್ಷದ ವರಿಷ್ಠರು ಕಿವಿಮಾತು ಹೇಳಿದರು ಎನ್ನಲಾಗಿದೆ.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.