ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಮುಂಗಾರು ಬಿರುಸುಗೊಂಡು ಮಳೆ ನಿರಂತರವಾಗಿ ಸುರಿಯತೊಡಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹದವಾಗಿ ಮಳೆ ಆಗುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚತೊಡಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ, ಕೊಡಗು ಜಿಲ್ಲೆಯಲ್ಲೂ ಮಳೆ ಆಗುತ್ತಿದೆ.
ಹಾಸನ ಜಿಲ್ಲೆಯ ಹಲವಡೆ ಸೋನೆ ಮಳೆ ಪ್ರಾರಂಭವಾಗಿದ್ದು ರೈತಾಪಿ ವರ್ಗದಲ್ಲಿ ಸಂತಸ ತಂದಿದೆ.
ಮಂಗಳೂರು ವರದಿ: ಮುಂಗಾರು ಮಳೆ ಕರಾವಳಿ ಭಾಗದಲ್ಲಿ ಮತ್ತೆ ಬಿರುಸಾಗಿದ್ದು, ಎಡೆಬಿಡದೆ ಸುರಿಯುತ್ತಿದೆ. 24 ಗಂಟೆಗಳ ಅವಧಿಯಲ್ಲಿ ಮಂಗಳೂರಿನಲ್ಲಿ 133.6 ಮಿ.ಮೀ. ಮತ್ತು ಉಡುಪಿಯಲ್ಲಿ 128.5 ಮಿ.ಮೀ. ಮಳೆ ಸುರಿದಿದೆ.
ಭಾರಿ ಮಳೆಯಿಂದಾಗಿ ಮೂಡುಬಿದಿರೆ ಮತ್ತು ಬಂಟ್ವಾಳಗಳಲ್ಲಿ ಎರಡು ಮನೆಗಳು ಕುಸಿದಿದ್ದು, ಉಡುಪಿ ತಾಲ್ಲೂಕಿನ ಉಪ್ಪೂರಿನಲ್ಲಿ ಮನೆಯೊಂದರ ಮೇಲೆ ಮರ ಮುರಿದುಬಿದ್ದು ಮನೆ ಹಾನಿಗೊಂಡಿದೆ. ಕುಂದಾಪುರ ತಾಲ್ಲೂಕಿನಲ್ಲಿ ಮೂರು ಮನೆಗಳ ಹೆಂಚುಗಳು ಹಾರಿ ಹೋಗಿವೆ.
ಬಿರುಸಿನ ಮಳೆಯೊಂದಿಗೆ ಕಡಲಿನ ಅಬ್ಬರವೂ ತೀವ್ರವಾಗಿದ್ದು, ಕಾಪು, ಮುಳೂರು, ಉಚ್ಚಿಲ, ಉದ್ಯಾವರಗಳಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಪಡುಕಾಪುವಿನಲ್ಲಿ 10 ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಮಂಗಳೂರಿನ ಜೆಪ್ಪು ಬಪ್ಪಲ್‌ನಲ್ಲಿ ಭೂ ಕುಸಿತ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯಲ್ಲೂ ಕಳೆದ 24 ಗಂಟೆಗಳಲ್ಲಿ ಜೋರಾಗಿ ಮಳೆ ಸುರಿದಿದೆ. ಬಹುತೇಕ ನದಿಗಳು ತುಂಬಿ ಹರಿಯತೊಡಗಿವೆ. ಚಿಕ್ಕಮಗಳೂರಿನ ಮಲೆನಾಡು ತಾಲ್ಲೂಕುಗಳಲ್ಲಿ ಸಹ ಬಿರುಸಿನ ಮಳೆಯಾಗಿದೆ.
ಕಾರವಾರ ವರದಿ: ಜಿಲ್ಲೆಯಾದ್ಯಂತ ಮುಂಗಾರು ಚುರುಕಾಗಿದೆ. ಸೋಮವಾರ ಬೆಳಗಿನ ಜಾವ ಆರಂಭವಾದ ಮಳೆ ರಾತ್ರಿವರೆಗೂ ಮುಂದುವರಿದಿತ್ತು. ಮಳೆ ಗಾಳಿಯಿಂದ ತಾಲ್ಲೂಕಿನ ಮಾಜಾಳಿಯಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು ಜೀವ ಕಳೆ ಬಂದಿದೆ. ಹೊನ್ನಾವರ ತಾಲ್ಲೂಕಿನಲ್ಲಿ ಶರಾವತಿ ನದಿ ತುಂಬಿ ಹರಿಯುತ್ತಿದ್ದು ಮಾವಿನಕುರ್ವಾ, ಹೈಗುಂದ, ಮೊಳ್ಕೋಡು, ಕುದ್ರಗಿ, ಕರಿಕುರ್ವಾ, ಸಂಶಿ, ನಗರಬಸ್ತಿಕೇರಿ, ಕುರ್ವೆ ದ್ವೀಪಗಳ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಮಳೆಯೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದ್ದು ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗ್ದ್ದಿದು ಸಾಂಪ್ರದಾಯಿಕ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಸೋಮವಾರ ಬೆಳಿಗ್ಗೆ 8ಕ್ಕೆ ಅಂತ್ಯಗೊಂಡ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 428.4 ಮಿ.ಮೀ ಮಳೆಯಾಗಿದೆ. ಭಟ್ಕಳ ತಾಲ್ಲೂಕಿನಲ್ಲಿ 68 ಮಿ.ಮೀ, ಹೊನ್ನಾವರ ತಾಲ್ಲೂಕಿನಲ್ಲಿ 77.6 ಮಿ.ಮೀ, ಕುಮಟಾ ತಾಲ್ಲೂಕಿನಲ್ಲಿ 58 ಮಿ.ಮೀ, ಶಿರಸಿ ತಾಲ್ಲೂಕಿನಲ್ಲಿ 58 ಮಿ.ಮೀ, ಕಾರವಾರ ತಾಲ್ಲೂಕಿನಲ್ಲಿ 31ಮಿ.ಮೀ ಮತ್ತು ಸಿದ್ದಾಪುರದಲ್ಲಿ 38 ಮಿ.ಮೀ ಮಳೆಯಾಗಿದೆ.
~ಮುಂಗಾರು ಚುರುಕಾಗ್ದ್ದಿದು ಜಿಲ್ಲೆಯಾದ್ಯಂತ ಅದರಲ್ಲೂ ಘಟ್ಟದ ಮೇಲೆ ಎರಡು ದಿನಗಳ ಉತ್ತಮ ಮಳೆ ಆಗಲಿದೆ. ಜತೆಗೆ ಗಂಟೆಗೆ 30-35ಕಿ.ಮೀ ವೇಗದಲ್ಲಿ ಗಾಳಿಯೂ ಬಿಸಲಿದೆ~ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಪ್ರಜಾವಾಣಿಗೆ ತಿಳಿಸಿದರು.
ಹುಬ್ಬಳ್ಳಿ ವರದಿ: ಹುಬ್ಬಳ್ಳಿ-ಧಾರವಾಡ ನಗರಗಳು ಸೇರಿದಂತೆ ಧಾರವಾಡ ಜಿಲ್ಲೆಯ ಹಲವೆಡೆ ಕೂಡ ಸೋಮವಾರ ಮುಂಜಾನೆಯಿಂದಲೂ ಮಳೆಯಾಗಿದೆ.
ಶಿವಮೊಗ್ಗ ವರದಿ: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೆ ನಿರಂತರ ಸಾಧಾರಣ ಮಳೆಯಾಗಿದೆ.
ಎ್ಲ್ಲಲೆಡೆ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಬತ್ತದ ಸಸಿಮಡಿ ಮಾಡಲು ಮಳೆಯನ್ನೇ ಎದುರು ನೋಡುತ್ತಿದ್ದ ರೈತರು, ಈಗ ಸ್ವಲ್ಪ ಮಳೆಯಾದ ಕಾರಣ ಗದ್ದೆಗೆ ಇಳಿದಿದ್ದಾರೆ.
ಅರೆಮಲೆನಾಡಾದ ಶಿಕಾರಿಪುರ, ಸೊರಬ, ಭದ್ರಾವತಿ ರೈತರು ಮೆಕ್ಕೆಜೋಳ ಬಿತ್ತನೆ ಆರಂಭಿಸಿದ್ದಾರೆ.
ತೀರ್ಥಹಳ್ಳಿ, ಸಾಗರ, ಹೊಸನಗರ ಸೇರಿದಂತೆ ಶರಾವತಿ ಜಲಾನಯನ ಪ್ರದೇಶಗಳಲ್ಲಿ 53 ಮಿ.ಮೀ. ಮಳೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯದ ಒಳಹರಿವು 12,908 ಕ್ಯೂಸೆಕ್‌ಗೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.