
ಬೆಂಗಳೂರು: 811 ಪ್ರಕರಣ, 180 ವಿದೇಶಿ ಪ್ರಜೆಗಳ ಬಂಧನ, ಸಾವಿರಾರು ಕೆ.ಜಿ ಮಾದಕ ವಸ್ತುಗಳು ಜಪ್ತಿ...!
ಇದು, ರಾಜ್ಯದಲ್ಲಿ ‘ಡ್ರಗ್ಸ್ ಮಾಫಿಯಾ’ ವಿರುದ್ಧ ಕಳೆದ ಎರಡೂವರೆ ವರ್ಷಗಳಲ್ಲಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯ ವಿವರ.
ದಶಕದ ಹಿಂದೆ ಹತ್ತಾರು ಕೋಟಿ ವ್ಯವಹಾರ ನಡೆಸುತ್ತಿದ್ದ ಡ್ರಗ್ಸ್ ಜಾಲಗಳು, ಈಗ ಸಾವಿರಾರು ಕೋಟಿ ಗಳಿಸುವ ಮಟ್ಟಕ್ಕೆ ಬೆಳೆದಿವೆ. ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಉದ್ಯೋಗಿಗಳು ಹಾಗೂ ವಿದೇಶಿ ಪ್ರವಾಸಿಗರೇ ಈ ಜಾಲಗಳಿಗೆ ಪ್ರಮುಖ ಗ್ರಾಹಕರಾಗಿದ್ದಾರೆ. ವ್ಯವಸ್ಥಿತ ಉದ್ಯಮವಾಗಿ ಮಾರ್ಪಟ್ಟಿರುವ ಈ ದಂಧೆ, ಈಗ ರಾಜ್ಯದ ಮೂಲೆ ಮೂಲೆಗೂ ಹರಡಿಕೊಂಡಿದೆ.
ವಿದ್ಯಾರ್ಥಿಗಳು ಮಾದಕ ವಸ್ತುಗಳ ಪೂರೈಕೆದಾರರಾಗಿ (ಪೆಡ್ಲರ್) ಬದಲಾಗುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅಂದರೆ, ಈ ವರ್ಷ ಬಂಧಿತರಾಗಿರುವ 234 ಆರೋಪಿಗಳ ಪೈಕಿ, ಶೇ 20ರಷ್ಟು ವಿದ್ಯಾರ್ಥಿಗಳೇ ಇದ್ದಾರೆ.
ಬೆಂಗಳೂರು ನಂ.1: ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಮಾದಕ ವಸ್ತು ಮಾರಾಟವಾಗುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮೂರು ವರ್ಷಗಳಲ್ಲಿ ಇಲ್ಲಿ 700 ಕೆ.ಜಿ ಮಾದಕ ವಸ್ತು ಜಪ್ತಿಯಾಗಿದೆ. ಪ್ರವಾಸಿ ತಾಣಗಳ ಕೇಂದ್ರಗಳಾದ ಮಂಗಳೂರು ಹಾಗೂ ಮೈಸೂರು ನಂತರದ ಸ್ಥಾನಗಳಲ್ಲಿವೆ.
ರಾಜ್ಯದಲ್ಲಿ ಗಾಂಜಾ: ‘ಮೈಸೂರು, ಕೋಲಾರ ಹಾಗೂ ಮಡಿಕೇರಿ ಜಿಲ್ಲೆಗಳಲ್ಲಿ ಕೆಲವರು ಗಾಂಜಾ ಬೇಸಾಯ ಮಾಡುತ್ತಿದ್ದುದನ್ನು ಬಿಟ್ಟರೆ, ಬೇರೆ ಮಾದಕ ವಸ್ತುಗಳ ತಯಾರಿಕಾ ಕೇಂದ್ರಗಳು ರಾಜ್ಯದಲ್ಲಿ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಅವೆಲ್ಲ ಹೊರ ರಾಜ್ಯಗಳು ಹಾಗೂ ವಿದೇಶಗಳಿಂದಲೇ ಬರುತ್ತವೆ ಎಂಬುದು ಸ್ಪಷ್ಟ’ ಎನ್ನುತ್ತಾರೆ ಎನ್‌ಸಿಬಿ ಅಧಿಕಾರಿಗಳು.
‘ಒಡಿಶಾ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಗಾಂಜಾ ಹೆಚ್ಚಾಗಿ ಬೆಳೆಯುತ್ತಾರೆ. ಅಂತೆಯೇ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್ ರಾಷ್ಟ್ರಗಳಲ್ಲಿ ಹೆರಾಯಿನ್ ಉತ್ಪಾದನೆಯಾಗುತ್ತದೆ.’
‘ಗಾಂಜಾ ಹೊರತುಪಡಿಸಿ ಉಳಿದೆಲ್ಲ ಮಾದಕ ವಸ್ತುಗಳು ಗಡಿದಾಟಿ ಅಕ್ರಮವಾಗಿ ರಾಜ್ಯದೊಳಗೆ ನುಸುಳುತ್ತಿವೆ. ಹೆಚ್ಚಾಗಿ ವಾಯು ಹಾಗೂ ಜಲ ಮಾರ್ಗಗಳ ಮೂಲಕ ಅವುಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ. ಗೋವಾ ಮೂಲಕ ಮಂಗಳೂರು ಬಂದರಿಗೆ ಬರುವ ವಿದೇಶಿ ಮಾದಕ ವಸ್ತುಗಳು, ಅಲ್ಲಿಂದ ರಾಜ್ಯದ ಇತರೆಡೆ ಸಾಗಣೆಯಾಗುತ್ತಿವೆ’ ಎಂದು ವಿವರಿಸಿದರು.
ವಿದೇಶಿ ಬ್ರ್ಯಾಂಡ್: ‘10–15 ವರ್ಷಗಳ ಹಿಂದೆ ಗಾಂಜಾ ಹಾಗೂ ಮ್ಯಾಜಿಕ್ ಮಶ್ರೂಮ್ (ಹುಚ್ಚು ಅಣಬೆ) ಮಾತ್ರ ಮಾದಕ ವಸ್ತುಗಳಾಗಿ ಸದ್ದು ಮಾಡುತ್ತಿದ್ದವು. ಕ್ರಮೇಣ ಅಫೀಮು, ಕೊಕೇನ್, ಬ್ರೌನ್‌ಶುಗರ್, ಹ್ಯಾಶೀಶ್, ಚರಸ್, ಹೆರಾಯಿನ್, ಎಫಿಡ್ರಿನ್, ಕೆಟಮಿನ್ ಸೇರಿದಂತೆ ತರಹೇವಾರಿ ಮಾದಕ ವಸ್ತುಗಳು ಕಾಳಸಂತೆಯಲ್ಲಿ ಸಿಗಲಾರಂಭಿಸಿದವು. ಒಮ್ಮೆ ಅಗೆದರೆ ಅಥವಾ ವಾಸನೆ ತೆಗೆದುಕೊಂಡರೆ 48 ಗಂಟೆಗಳವರೆಗೆ ನಶೆ ಇರುವ ಕಾರಣ ಈ ವಿದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಯಿತು’ ಎಂದು ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳೇ ಪೆಡ್ಲರ್: ಯುವಕರನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿರುವ ಈ ಜಾಲಗಳು, ಅದಕ್ಕಾಗಿ ವಿದ್ಯಾರ್ಥಿಗಳನ್ನೇ ಮಾದಕ ವಸ್ತುಗಳ ಮಾರಾಟಗಾರರನ್ನಾಗಿ ಬಳಸಿಕೊಳ್ಳುತ್ತಿವೆ. ಶಾಲೆ–ಕಾಲೇಜುಗಳ ಬಳಿ ಬರುವ ಜಾಲದ ಸದಸ್ಯರು, ಹಣದ ಅಗತ್ಯವಿರುವ ಬಡ ವಿದ್ಯಾರ್ಥಿಗಳು ಅಥವಾ ಈಗಾಗಲೇ ಮಾದಕ ವ್ಯಸನಿಗಳಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿಕೊಳ್ಳುತ್ತಾರೆ. ನಂತರ ಅವರಿಗೆ ಹಣದ ಆಮಿಷ ತೋರಿಸಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ.
ಮೂಲವೇ ಕಷ್ಟ: ‘ಮಾದಕ ವಸ್ತುಗಳು ಹತ್ತಾರು ಕೈಗಳನ್ನು ದಾಟಿ ವ್ಯಸನಿಗಳ ಕೈ ಸೇರುತ್ತವೆ. ಯಾವುದೇ ಕಾರಣಕ್ಕೂ ‘ಮೂಲ’ ಗೊತ್ತಾಗಬಾರದು ಎಂದು ವ್ಯವಸ್ಥಿತವಾಗಿ ಈ ಜಾಲ ಕೆಲಸ ಮಾಡುತ್ತದೆ. ಜಾಲದ ಸದಸ್ಯರಿಗೂ ತಮ್ಮ ಮುಖ್ಯಸ್ಥನ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಮಾರಾಟಗಾರ ಸಿಕ್ಕರೂ, ಜಾಲದ ಬಗ್ಗೆ ಮಾಹಿತಿ ಸಿಗುವುದಿಲ್ಲ’ ಎಂದು ಕೇಂದ್ರ ಮಾದಕ ವಸ್ತು ನಿಗ್ರಹ ಘಟಕದ ಅಧಿಕಾರಿ ತಿಳಿಸಿದರು.
ಗ್ರಾಂಗೆ ಲಕ್ಷ ರೂಪಾಯಿ!: ‘ಎಲ್‌ಎಸ್‌ಡಿ ಎಂಬ ಮಾದಕ ದ್ರವ್ಯ ಒಂದು ಗ್ರಾಂಗೆ ₹ 1.20 ಲಕ್ಷಕ್ಕೆ ಮಾರಾಟವಾಗುತ್ತಿದೆ. ಅಂತೆಯೇ ಒಂದು ಕೆ.ಜಿ ಕೊಕೇನ್‌ಗೆ ₹ 6 ಕೋಟಿ ಹಾಗೂ ಹೆರಾಯಿನ್‌ಗೆ ₹ 40 ಲಕ್ಷ ಬೆಲೆ ಇದೆ. ಗಾಂಜಾ ₹ 25 ಸಾವಿರಕ್ಕೆ ಸಿಗುತ್ತದೆ. ಇವು ದುಬಾರಿಯಾದ ಕಾರಣ ಕೆಲವರು ಸೈಕಲ್‌ಶಾಪ್‌ಗಳಲ್ಲಿ ಸಿಗುವ ಸಲ್ಯೂಷನ್ ಹಾಗೂ ಅವಧಿ ಮುಗಿದ ಮಾತ್ರೆಗಳಿಂದ ನಶೆ ಬರಿಸಿಕೊಳ್ಳುತ್ತಾರೆ’ ಎಂದು ಸಿಸಿಬಿ ಎಸಿಪಿಯೊಬ್ಬರು ಮಾಹಿತಿ ನೀಡಿದರು.
ಹೊಟ್ಟೆಯಲ್ಲಿತ್ತು ₹ 6 ಕೋಟಿಯ ಕೊಕೈನ್
ಇದೇ ಮಾರ್ಚ್‌ನಲ್ಲಿ ಎನ್‌ಸಿಬಿ ಅಧಿಕಾರಿಗಳು ನೈಜೀರಿಯಾದ ಸ್ಯಾಮ್ಯುಯಲ್ ಎಂಬಾತನನ್ನು ಕೆಐಎಎಲ್‌ನಲ್ಲಿ ಬಂಧಿಸಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಅಧಿಕಾರಿಗಳೇ ದಂಗು ಬಡಿದಂತಾಯಿತು. ಏಕೆಂದರೆ ಸ್ಯಾಮ್ಯುಯಲ್‌ನ ಹೊಟ್ಟೆಯಲ್ಲಿ ₹ 6 ಕೋಟಿ ಮೌಲ್ಯದ ಕೊಕೇನ್ ಮಾತ್ರೆಗಳು ಇರುವುದು ಗೊತ್ತಾಗಿತ್ತು.
ಈ ದಂಧೆಯ ಆರೋಪಿಗಳು ಕೊಕೇನ್, ಹೆರಾಯಿನ್, ಎಲ್‌ಸಿಡಿ ಸೇರಿ ಇತರೆ ಮಾದಕ ವಸ್ತುಗಳನ್ನು ಮಾತ್ರೆಗಳಂತೆ ಮಾಡಿಕೊಳ್ಳುತ್ತಾರೆ. ಆ ಮಾತ್ರೆಗಳನ್ನು ಕವರ್‌ಗಳಲ್ಲಿ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ನುಂಗುತ್ತಾರೆ. ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ತಪ್ಪಿಸಿ ರಾಜ್ಯಕ್ಕೆ ಬಂದ ಬಳಿಕ, ಗುದದ್ವಾರದ ಮೂಲಕ ಅವುಗಳನ್ನು ಹೊರ ತೆಗೆಯುತ್ತಾರೆ. ಒಮ್ಮೆ ಈ ಮಾತ್ರೆಗಳನ್ನು ತೆಗೆದುಕೊಂಡರೆ 48 ಗಂಟೆ ಆಹಾರ–ನೀರು ಸೇವಿಸುವುದಿಲ್ಲ.
ಕಣ್ತಪ್ಪಿಸಲು ನಾನಾ ಸಂಚು
ಅಧಿಕಾರಿಗಳ ಕಣ್ತಪ್ಪಿಸಿ ವಿಮಾನ ನಿಲ್ದಾಣಗಳಿಂದ ಮಾದಕ ವಸ್ತುಗಳನ್ನು ಹೊರತರಲು ವಿದೇಶಿ ಆರೋಪಿಗಳು ನಾನಾ ಕಸರತ್ತು ನಡೆಸುತ್ತಾರೆ.
ಮಾದಕ ವಸ್ತುವಿನ ಪುಡಿಯನ್ನು ಅಕ್ಕಿ–ಗೋಧಿ ಹಿಟ್ಟುಗಳಲ್ಲಿ ಮಿಶ್ರಣ ಮಾಡಿಕೊಂಡು ತರುತ್ತಾರೆ. ಚಾಕೋಲೆಟ್ ಮಾದರಿಯಲ್ಲಿ ಡ್ರಗ್ಸ್ ಪ್ಯಾಕಿಂಗ್ ಮಾಡಿಕೊಂಡು ಅಧಿಕಾರಿಗಳ ದಿಕ್ಕು ತಪ್ಪಿಸುತ್ತಾರೆ. ಪಾದ ಕೊಯ್ದುಕೊಂಡು ಅದರಲ್ಲಿ ಮಾದಕ ವಸ್ತುವನ್ನು ಇಟ್ಟುಕೊಂಡಿದ್ದ ಆರೋಪಿಯೊಬ್ಬ ಇತ್ತೀಚೆಗೆ ಕೆಐಎಎಲ್ ಅಧಿಕಾರಿಗಳ ಬಲೆಗೆ ಬಿದ್ದಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.