ADVERTISEMENT

ಕಲಾವಿದರ ಬ್ಯಾಂಕ್‌ ಖಾತೆಗೆ ಗೌರವಧನ

ಕನ್ನಡ, ಸಂಸ್ಕೃತಿ ಇಲಾಖೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಬೆಂಗಳೂರು: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನೀಡಲು ಅಗತ್ಯ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಇಲಾಖೆಯ ನೂತನ ನಿರ್ದೇಶಕ ಕೆ.ಎ. ದಯಾನಂದ ಹೇಳಿದರು.

ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕಲಾವಿದರಿಗೆ ನೀಡುವ ಗೌರವ ಧನವನ್ನು ನೇರವಾಗಿ ಆರ್‌ಟಿಜಿಎಸ್‌ ವಿಧಾನದ ಮೂಲಕ ಅವರ ಬ್ಯಾಂಕ್‌ ಖಾತೆಗೆ  ವರ್ಗಾವಣೆ ಮಾಡಲು ಉದ್ದೇಶಿ­ಸಲಾಗಿದ್ದು, ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ’ ಎಂದು ತಿಳಿಸಿದರು.

‘ಪ್ರತಿದಿನದ ಕಡತಗಳನ್ನು ಆಯಾದಿನ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಜತೆ ಚರ್ಚಿಸಲಾಗಿದೆ. ಇದರಿಂದ ಅರ್ಜಿದಾರರು ಕಚೇರಿಗೆ ಬರುವ ತೊಂದರೆ ತೆಗೆದುಕೊಳ್ಳದೆ ಮನೆಯಲ್ಲಿ ಕುಳಿತೇ ತಮ್ಮ ಅರ್ಜಿ ಕುರಿತ ಆಯಾ ಕ್ಷಣದ ಮಾಹಿತಿ ಪಡೆಯಬಹುದಾಗಿದೆ’ ಎಂದು ವಿವರಿಸಿದರು.

‘ಹಂತ–ಹಂತವಾಗಿ ಕಾಗದರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇಲಾಖೆ ಚಟುವಟಿಕೆಗಳಿಗೆ ಪಾರದರ್ಶಕ ಸ್ಪರ್ಶವನ್ನು ನೀಡುವ ಮತ್ತೊಂದು ಯತ್ನವಾಗಿ ಕಚೇರಿಯ ಎಲ್ಲ ವಿಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವ ಅರ್ಹ ತಂಡಗಳಿಗೆ ಮಾತ್ರ ಧನ ಸಹಾಯ ನೀಡಲು ನಿರ್ಧರಿಸಲಾಗಿದೆ. ದೂರುಗಳಿಗೆ ಆಸ್ಪದ ಇಲ್ಲದಂತೆ ಪಾರದರ್ಶಕ ನೆಲೆಯಲ್ಲಿ ತೀರ್ಮಾನ ಕೈಗೊಳ್ಳುವ ಮೂಲಕ ತಳಮಟ್ಟದಿಂದ ಇಲಾಖೆ ಚಟುವಟಿಕೆಗಳನ್ನು ಗಟ್ಟಿಗೊಳಿಸಲಾಗುತ್ತದೆ’ ಎಂದು ಹೇಳಿದರು.

ಮಾತುಕತೆಗೆ ಹೊಸರೂಪ
‘ಮನೆಯಂಗಳದ ಮಾತುಕತೆ’ ಹಲವು ವರ್ಷಗಳಿಂದ ನಡೆ­ಯುತ್ತಿದ್ದು, ಕಾರ್ಯಕ್ರಮದ ಏಕತಾನತೆಯಿಂದ ಜನರಲ್ಲಿ ಆಸಕ್ತಿ ಕಡಿಮೆ­ಯಾದಂತಿದೆ.  ಹೀಗಾಗಿ ಅದಕ್ಕೆ ಹೊಸ ಸ್ವರೂಪ ನೀಡಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತರಬೇಕಾದ ಬದಲಾವಣೆಗಳ ಬಗೆಗೆ ಸಾಹಿತಿಗಳ ಜತೆ ಚರ್ಚೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಅಕಾಡೆಮಿಗಳಿಗೆ ಹೊಸಬರ ನೇಮಕವಾಗಿದ್ದು, ಅಕಾಡೆಮಿ ಸದಸ್ಯರು, ಸಾಹಿತಿಗಳು, ಕಲಾವಿದರ ಜತೆ ಕುಳಿತು ಚರ್ಚೆ ನಡೆಸಿ, ಅಕಾಡೆಮಿಗಳು ಹಮ್ಮಿಕೊಳ್ಳಬೇಕಾದ ಮೌಲಿಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರೂಪು–ರೇಷೆ ಸಿದ್ಧ­ಪಡಿಸ­ಲಾಗುವುದು’ ಎಂದು ಹೇಳಿದರು.

‘ಬರಗೂರು ರಾಮ­ಚಂದ್ರಪ್ಪ ಅವರ ನೇತೃತ್ವದ ಸಮಿತಿ ಸಾಂಸ್ಕೃತಿಕ ನೀತಿಗಳಿಗೆ ಸಂಬಂ­ಧಿಸಿ­ದಂತೆ ಕರಡು ವರದಿಯನ್ನು ಸಿದ್ಧಪಡಿಸಿದ್ದು, ಚುನಾ­ವಣಾ ಪ್ರಕ್ರಿಯೆ ಮುಗಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.