ADVERTISEMENT

ಕಲೆ ಜಾತಿ, ಭಾಷೆ ಮೀರಿದ್ದು: ನಾಗತಿಹಳ್ಳಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST
ಕಲೆ ಜಾತಿ, ಭಾಷೆ ಮೀರಿದ್ದು: ನಾಗತಿಹಳ್ಳಿ
ಕಲೆ ಜಾತಿ, ಭಾಷೆ ಮೀರಿದ್ದು: ನಾಗತಿಹಳ್ಳಿ   

ಶೋಭಾವನ (ಮೂಡುಬಿದಿರೆ): `ಚಿತ್ರಕಲೆ ಜೀವನದ ಸತ್ಯವನ್ನು ಹೇಳುತ್ತದೆ. ಬದುಕನ್ನು ಬೇರೆ ಬೇರೆ ಮಗ್ಗುಲಲ್ಲಿ ಸುಲಭದಲ್ಲಿ ಗ್ರಹಿಸಲು ಚಿತ್ರಕಲೆಯಲ್ಲಿ ಮಾತ್ರ ಸಾಧ್ಯ. ಇದು ಭಾಷೆ ಮತ್ತು ಜಾತಿಯ ಗಡಿ ಮೀರಿ ಬೆಳೆದು ಬಂದ ಕಲೆಯಾಗಿರುವುದರಿಂದ ಪರಸ್ಪರ ಅಂತರಂಗ ಸಂಬಂಧವನ್ನು ವೃದ್ಧಿಗೊಳಿಸುತ್ತದೆ~ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಿಜಾರು ಶೋಭಾವನದಲ್ಲಿ ಭಾನುವಾರ ಕೇರಳ ಲಲಿತಕಲಾ ಅಕಾಡೆಮಿಯ ಮಾಜಿ ಕಾರ್ಯದರ್ಶಿ, ಹಿರಿಯ ಚಿತ್ರಕಾರ ಸತ್ಯಪಾಲ್ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ 2012ರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

ವ್ಯಾವಹಾರಿಕ ಒತ್ತಡದಿಂದಾಗಿ ಕಲೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದರೂ ಹೊಸಬರು ಪಾರಂಪರಿಕ ಚೌಕಟ್ಟಿನೊಳಗೆ ಹೊಸತನದ ಪ್ರಯೋಗ ನಡೆಸುತ್ತಿರುವುದು ಅಚ್ಚರಿ ಮೂಡಿಸುತ್ತದೆ. 3 ಇಲ್ಲವೆ 4 ಗೆರೆಗಳಲ್ಲಿ ಮಹಾಭಾರತವನ್ನು ಸೃಷ್ಟಿಸಲು ಸಾಧ್ಯವಿದ್ದರೆ ಅದು ಕಲಾವಿದನಿಗೆ ಮಾತ್ರ ಎಂದು ಅವರು ಹೇಳಿದರು. ಇದಕ್ಕೂ ಮೊದಲು ಅವರು ಸತ್ಯಪಾಲ್ ಅವರಿಗೆ 25 ಸಾವಿರ ನಗದು, ಪ್ರಶಸ್ತಿ ಫಲಕ ಪ್ರದಾನ ಮಾಡಿದರು. 

ADVERTISEMENT

ಮಂಗಳೂರು ಆರ್ಟಿಸ್ಟ್ ಕಂಬೈನ್ ಜತೆ ಕಾರ್ಯದರ್ಶಿ, ಮೀನುಗಾರಿಕಾ ಕಾಲೇಜು ಪ್ರಾಧ್ಯಾಪಕ ಡಾ.ಎಸ್.ಎಂ.ಶಿವಪ್ರಕಾಶ್ ತಾವು ರಚಿಸಿದ ಸತ್ಯಪಾಲ್ ಅವರ ರೇಖಾಚಿತ್ರವೊಂದನ್ನು ಸತ್ಯಪಾಲ್ ಅವರಿಗೆ ಹಸ್ತಾಂತರಿಸಿದರು. ಇನ್ನೋರ್ವ ಮುಖ್ಯ ಅತಿಥಿ, ಕಲಾವಿದ ಮುಂಬೈ ಪದ್ಮನಾಭ ಬೇಂದ್ರೆ ಮಾತನಾಡಿದರು.

ರಾಜ್ಯದ ದುಡಿಯವ ಮಕ್ಕಳ ಕಾಳಜಿ ಕುರಿತ ಅಭಿವೃದ್ಧಿ ವಿಭಾಗ (ಸಿ.ಡಬ್ಲ್ಯು.ಸಿ)ದ ನಿರ್ದೇಶಕಿ  ನಂದನಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡ 20 ಕಲಾವಿದರಿಗೆ ಸಂಸ್ಥೆಯ ಅಧ್ಯಕ್ಷ ಎಂ. ಮೋಹನ್ ಆಳ್ವ ಪ್ರಮಾಣ ಪತ್ರ ನೀಡಿ ಗೌರವಿಸಿದರು. ದೃಶ್ಯಕಲಾ ವಿಭಾದ ಡೀನ್ ರಾಮ್‌ದಾಸ್ ಅಡ್ಯಂತಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.