ADVERTISEMENT

ಕಲ್ಲಿದ್ದಲು ಲಭ್ಯ, ಖರೀದಿಗೆ ಹಣವಿಲ್ಲ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಮೈಸೂರು:  `ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಓಡಿಶಾ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯವಿದೆ. ಆದರೆ, ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

`ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ರಾಜ್ಯದ ಐದು ವಿದ್ಯುತ್ ಕಂಪೆನಿಗಳ ರೂ. 10 ಸಾವಿರ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಛತ್ತೀಸ್‌ಗಡದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸುತ್ತೇವೆ ಎಂದು ಹೇಳುತ್ತಲೇ ಬಂದಿದೆ. ಆದರೆ, ಇದುವರೆಗೂ ಒಂದೇ ಒಂದು ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ~ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

`84 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ, ಬರ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗೆ ಅಗತ್ಯ ಅನುದಾನ ನೀಡಿಲ್ಲ. ಚಾಮರಾಜನಗರದಲ್ಲಿ ರೂ.58ಲಕ್ಷ,ಮಂಡ್ಯ ರೂ. 1 ಕೋಟಿ, ತುಮಕೂರು ಜಿಲ್ಲಾಧಿಕಾರಿ ಬಳಿ ರೂ. 2.5 ಕೋಟಿ, ಚಿತ್ರದುರ್ಗ ಜಿಲ್ಲಾಡಳಿತ ಬಳಿ ರೂ. 6 ಕೋಟಿ ಹಣವಿದೆ. ಆದ್ದರಿಂದ ಬರಗಾಲವನ್ನು ನಿಯಂತ್ರಿಸಲು ಕೂಡಲೇ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು~ ಎಂದು ಒತ್ತಾಯಿಸಿದರು.

ADVERTISEMENT

`ತುಮಕೂರು ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಶೇಂಗಾ ಬೆಳೆ, ಒಂದು ಲಕ್ಷ ಹೆಕ್ಟೇರ್ ರಾಗಿ ಫಸಲು ನಷ್ಟವಾಗಿದೆ. ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿದರೂ ಮೇವು ಬ್ಯಾಂಕ್ ಆರಂಭಿಸಿಲ್ಲ. ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗಮನ ಹರಿಸಬೇಕಾದ ಸರ್ಕಾರ ರಾಷ್ಟ್ರೀಯ ಗ್ರಿಡ್‌ನಿಂದ ರಾಜ್ಯಕ್ಕೆ ವಿದ್ಯುತ್ ಬರುತ್ತಿಲ್ಲ, ಕೇಂದ್ರ ಸಕಾಲಕ್ಕೆ ಕಲ್ಲಿದ್ದಲು ಪೂರೈಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯಲ್ಲ~ ಎಂದರು.

`ರಾಜ್ಯದ ನಿಯೋಗದೊಂದಿಗೆ ಕೇಂದ್ರಕ್ಕೆ ಬರುವಂತೆ ವಿರೋಧ ಪಕ್ಷದವರಿಗೂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ನೀವೂ ಹೋಗುತ್ತೀರಾ?~ ಎಂಬ ಪ್ರಶ್ನೆಗೆ, `ಸರ್ಕಾರದಿಂದ ಇದುವರೆಗೂ ನನಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ. ಆಹ್ವಾನ ಬಂದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಈಗಲೇ ಏನೂ ಹೇಳಲಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.