ADVERTISEMENT

ಕಳಸಾ-ಬಂಡೂರಿ ವಿಳಂಬಕ್ಕೆ ಕೇಂದ್ರ ಕಾರಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಅಳಗವಾಡಿ (ಧಾರವಾಡ): `ಮಹಾದಾಯಿ ನ್ಯಾಯಾಧೀಕರಣಕ್ಕೆ ನ್ಯಾಯಾಧೀಶರ ನೇಮಕ ಮಾಡಲು ವಿಳಂಬ ಮಾಡಿದ್ದಲ್ಲದೆ ನ್ಯಾಯಾಧೀಕರಣಕ್ಕೆ ಮೂಲ ಸೌಕರ್ಯ ಒದಗಿಸಲು ಮೀನ-ಮೇಷ ಎಣಿಸುವ ಮೂಲಕ ಕೇಂದ್ರ ಸರ್ಕಾರವೇ ಕಳಸಾ-ಬಂಡೂರಿ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಗಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಗ್ರಾಮದ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ  ಮಾತನಾಡಿದರು.

`ಅರಣ್ಯ ಪ್ರದೇಶ ಬಿಟ್ಟು ಉಳಿದ ಕಡೆ ಕಾಮಗಾರಿ ಆರಂಭಿಸಲಾಗಿದೆ. ನ್ಯಾಯಾಧೀಕರಣದ ಕೆಲಸವನ್ನು ಅದರ ಪಾಡಿಗೆ ಬಿಟ್ಟು, ಮಾತುಕತೆ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದೇವೆ. 7.5 ಟಿಎಂಸಿ ನೀರು ತರುವ ಈ ಯೋಜನೆಯನ್ನು ನಾವು ಖಂಡಿತವಾಗಿ ಅನುಷ್ಠಾನಕ್ಕೆ ತರುತ್ತೇವೆ~ ಎಂದು ಅವರು ಭರವಸೆ ನೀಡಿದರು.

`ನೀರಾವರಿ ಸೌಲಭ್ಯದಿಂದ ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆ ತರಲು ಸಾಧ್ಯ ಎನ್ನುವುದು ನಮ್ಮ ಸರ್ಕಾರದ ಬಲವಾದ ನಂಬಿಕೆಯಾಗಿದೆ. ಆದ್ದರಿಂದಲೇ ನೀರಾವರಿ ಪ್ರದೇಶವನ್ನು ಹೆಚ್ಚಿಸುವುದು ನಮ್ಮ ಆದ್ಯತಾ ವಿಷಯವಾಗಿದೆ~ ಎಂದ ಅವರು, `ಸವುಳು ನೆಲವನ್ನು ಮತ್ತೆ ಫಲವತ್ತಾದ ಭೂಮಿಯಾಗಿ ಪರಿವರ್ತಿಸುವ ಕೆಲಸವೂ ನಡೆದಿದೆ~ ಎಂದರು.

`ಬರದ ಬವಣೆ ತಪ್ಪಿಸಲು ಸರ್ಕಾರ ಏನು ಮಾಡಿದೆ~ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ರೈತರೊಬ್ಬರು ಏರು ಧ್ವನಿಯಲ್ಲಿ ಕೇಳಿದರು. `ಈಗ ಅದೇ ವಿಷಯಕ್ಕೆ ಬರುತ್ತೇನೆ. ರಾಜ್ಯದಲ್ಲಿ ಈಗಾಗಲೇ 123 ತಾಲ್ಲೂಕುಗಳನ್ನು ಬರಪೀಡಿತ ಎನ್ನುವ ಘೋಷಣೆ ಮಾಡಲಾಗಿದೆ.

ಇನ್ನೂ 40 ತಾಲ್ಲೂಕುಗಳು ಅದೇ ಹಾದಿಯಲ್ಲಿವೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬರ ಕಾಮಗಾರಿ ಆರಂಭಿಸಲಾಗಿದೆ~ ಎಂದರು.`ಬೇರೆ ಎಲ್ಲ ಕೆಲಸಗಳನ್ನು ಬದಿಗೊತ್ತಿ ಬರ ಪರಿಹಾರ ಕಾಮಗಾರಿಗೆ ಆದ್ಯತೆ ನೀಡುತ್ತೇವೆ. ನಾನೊಬ್ಬ ರೈತರ ಮುಖ್ಯಮಂತ್ರಿಯಾಗಿದ್ದು, ರೈತರ ಹಿತರಕ್ಷಣೆಗಾಗಿಯೇ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಸಲುವಾಗಿ ನನ್ನ ಸರ್ಕಾರ~ ಎಂದು ಘೋಷಿಸಿದರು.

ಗೊಬ್ಬರಗುಂಪಿ-ಸವದತ್ತಿ ರಸ್ತೆ ಸುಧಾರಣೆ ಹಾಗೂ ರೈತ ಸ್ಮಾರಕಗಳ ಪುನರುಜ್ಜೀವನಕ್ಕೆ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು ಎಂದೂ ಅವರು ಪ್ರಕಟಿಸಿದರು.ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಕಳಸಾ-ಬಂಡೂರಿ ಯೋಜನೆಯಲ್ಲಿ ಇದುವರೆಗೆ ಆಗಿರುವ ಪ್ರಗತಿ ಕುರಿತಂತೆ ವಿವರಿಸಿದರು. `ಮಲಪ್ರಭಾ ಕಾಲುವೆಗಳ ದುರಸ್ತಿಗೆ ಒಟ್ಟಾರೆ 659 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ~ ಎಂದು ಹೇಳಿದರು.

ಮುಖ್ಯಮಂತ್ರಿಗೆ ಜೆಡಿಎಸ್ ಘೇರಾವ್
ನವಲಗುಂದ: `ರಾಜ್ಯದಲ್ಲಿ ಬರಗಾಲ ತಲೆದೋರಿದ್ದರೂ ಅಧಿಕಾರಕ್ಕೆ ಕಿತ್ತಾಟ ನಡೆಸಿರುವ ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ~ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ರೈತ ಹುತ್ಮಾತರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಘೇರಾವ್ ಹಾಕಿ ಪ್ರತಿಭಟಿಸಿದರು.

ರೈತರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದು ಅವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬರಗಾಲ ಪೀಡಿತ ರೈತರಿಗೆ ಪ್ರತಿ ಹೆಕ್ಟೇರ್‌ಗೆ 25,000 ರೂಪಾಯಿ ಪರಿಹಾರ ನೀಡಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡಬೇಕು. ಕಳಸಾ-ಬಂಡೂರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಪ್ರತಿಭಟನಾಕಾರರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.ಎನ್.ಎಚ್. ಕೋನರಡ್ಡಿ, ಬಿ.ಬಿ. ಗಂಗಾಧರಮಠ, ಲೋಕನಾಥ ಹೆಬಸೂರ, ಇಮಾಮಸಾಬ್ ಖುದ್ದಣ್ಣವರ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.