ADVERTISEMENT

ಕಾಂಗ್ರೆಸ್‌ ಸಂಸದರಿಗೂ ಮೌಲ್ಯಮಾಪನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಪ್ರತಿ ನಾಲ್ಕು ತಿಂಗಳಿ ಗೊಮ್ಮೆ ಸಚಿವರ, ಶಾಸಕರ ಜತೆಗೆ ಸಂಸದರ ಕಾರ್ಯವೈಖರಿಯನ್ನು ಸಹ ಮೌಲ್ಯ ಮಾಪನ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಸೂಚನೆ ಮೇರೆಗೆ ಮೌಲ್ಯಮಾಪನ ಕೈಗೊಳ್ಳ ಲಾಗುತ್ತಿದೆ. ಇದು ಇಡೀ ದೇಶಾದ್ಯಂತ ನಡೆಯುತ್ತಿದೆ.  ಈ ಮೌಲ್ಯಮಾಪನದ ವರದಿಯನ್ನು ಎಐಸಿಸಿ ಸಭೆಯಲ್ಲಿ ಮಂಡಿಸಲಾಗು ವುದು ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ನಾಲ್ಕು ತಿಂಗಳಿಗೊಮ್ಮೆ ಮೌಲ್ಯ ಮಾಪನ ಕೈಗೊಳ್ಳಿ ಎಂದು ರಾಹುಲ್‌ ಗಾಂಧಿ ಸೂಚಿಸಿದ್ದಾರೆ. ಮೌಲ್ಯಮಾಪನದ ಮಾನದಂಡಗಳು ಅಥವಾ ಪ್ರಶ್ನಾವಳಿಗಳನ್ನು ಇನ್ನೂ ರೂಪಿಸಿಲ್ಲ ಎಂದು ಅವರು ವಿವರಿಸಿದರು.

ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಯಾವುದೇ  ಹೇಳಿಕೆಯನ್ನು ತಾವು ನೀಡಿಲ್ಲ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐ ಡಿಎಐ) ಅಧ್ಯಕ್ಷ ನಂದನ್‌ ನೀಲೇಕಣಿ ಸ್ಪರ್ಧಿಸುವ ವಿಷಯವೂ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಪುಟದಿಂದ ಕೈಬಿಡುವುದಿಲ್ಲ: ಸಚಿವ ಸಂತೋಷ್‌ ಲಾಡ್‌  ಹೆಸರು ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪ ವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿ ಹೇಳಿದಂತೆ ಸಂಪುಟ ದಿಂದ ಲಾಡ್‌ ಅವರನ್ನು ಕೈಬಿಡುವುದಿಲ್ಲ ಎಂದು ಪ್ರತಿಪಾದಿಸಿದರು. ಯಾವುದೇ ವ್ಯಕ್ತಿ ಅಕ್ರಮ ಗಣಿಗಾ ರಿಕೆಯಲ್ಲಿ ತೊಡಗಿರುವುದು ಸಾಬೀತಾದರೆ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಮತ್ತು ಪಕ್ಷದಲ್ಲಿ ಇಟ್ಟು ಕೊಳ್ಳುವುದಿಲ್ಲ. ಅಕ್ರಮಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದರೆ ದಾಖಲೆಗಳನ್ನು ಪರಿಶೀಲಿಸಬೇಕಾ ಗುತ್ತದೆ ಎಂದು ನುಡಿದರು.

ಸಂಪುಟದಿಂದ ಲಾಡ್‌ ಅವರನ್ನು ಕೈ ಬಿಡುವಂತೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿ ರುವ ಹೋರಾಟ ಕೇವಲ ರಾಜಕೀಯ ಪ್ರೇರಿತವಾಗಿದೆ. 2011ರಲ್ಲೇ ಲೋಕಾ ಯುಕ್ತರು ವರದಿ ನೀಡಿದ್ದರೂ ಬಿಜೆಪಿ ಸರ್ಕಾರ ಕ್ರಮಕೈಗೊಳ್ಳದೆ ಪರಿಶೀಲನೆಗಾಗಿ ಮತ್ತೊಂದು ಸಮಿ ತಿಗೆ ವಹಿಸಿತು. ಸಂವಿಧಾನಾತ್ಮಾಕವಾಗಿ ಸ್ಥಾಪಿಸಲಾಗಿ ರುವ ಲೋಕಾಯುಕ್ತ ಸಂಸ್ಥೆವರದಿಯನ್ನು ಮತ್ತೊಂದು ಸಮಿತಿಗೆ ನೀಡುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು.

ಮಂಡ್ಯದಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರ ನಡುವೆ ನಡೆದ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು,  ‘ರಾಜಕೀಯದಲ್ಲಿ ಆರೋಪ–ಪ್ರತ್ಯಾರೋಪ ಸಹಜ. ಆದರೆ, ಕೆಲವರು ಹೊಡೆದಾಡಿಕೊಂಡಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ನಿಯಂತ್ರಿಸುತ್ತೇವೆ. ಈ ಘಟನೆ ಹಿನ್ನೆಲೆಯಲ್ಲಿ ಯಾವುದೇ ಮುಖಂಡರಿಗೆ ನೋಟಿಸ್‌ ನೀಡಿಲ್ಲ. ವಿಧಾನಸಭೆ ಚುನಾವಣೆ ಘೋಷಿಸಿದ ನಂತರ ಇದುವರೆಗೆ ಅಶಿಸ್ತು ಉಲ್ಲಂಘಿಸಿದ ಕಾರಣಕ್ಕೆ 450 ದೂರುಗಳು ಬಂದಿವೆ’ ಎಂದು ತಿಳಿಸಿದರು.ಜೆಡಿಎಸ್‌ ಶಾಸಕ ಜಮೀರ್‌ ಅಹ್ಮದ್‌ ಕಾಂಗ್ರೆಸ್‌ಗೆ ಬರುವುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.