ADVERTISEMENT

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಬೆಂಗಳೂರು: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, `ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಪ್ರತಿ ರಾತ್ರಿ ಅವರ ನಿವಾಸಕ್ಕೆ ತೆರಳಿ ಡಿನೋಟಿಫಿಕೇಷನ್ ಕಡತಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಮುಖಂಡರು, ಈಗ ಜೆಡಿಎಸ್ ಸೂಚನೆಯ ಮೇರೆಗೆ ಬಿಜೆಪಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎನ್ನುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು~ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೆಡಿಎಸ್‌ನ `ಯುವ ಚೇತನ ಸಮಾವೇಶ~ದಲ್ಲಿ ಮಾತನಾಡಿದ ಅವರು, `ನಾನು ಯಾವುದೇ ಆರೋಪವನ್ನು ಅಂಕಿ-ಅಂಶಗಳ ಸಮೇತ ಮಾಡಿದ್ದೇನೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ `ಪಟಾಲಂ~ನಂತೆ ಬಾಲಿಶವಾಗಿ ಮಾತನಾಡಿಲ್ಲ~ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, `ಮಂಗಳೂರಿನಲ್ಲಿ ನೆಲೆಯಿಲ್ಲದೆ ಚಿಕ್ಕಬಳ್ಳಾಪುರಕ್ಕೆ ಬಂದು, ನಾವು ಮಾಡಿದ ಕೆಲವು ತಪ್ಪುಗಳಿಂದಾಗಿ ಗೆಲುವು ಸಾಧಿಸಿದರು.

ಮೊಯಿಲಿ ಅವರು ನಮ್ಮ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಮುಖಂಡರೇ ವಿಧಾನಸೌಧದ ಮೂರನೆಯ ಮಹಡಿಯಿಂದ ಅವರನ್ನು ಓಡಿಸಿದ್ದರು~ ಎಂದರು.
`ಎಸ್.ಎಂ. ಕೃಷ್ಣ, ಯಡಿಯೂರಪ್ಪ ಅವರಂತೆ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿ ಆದವ ನಾನಲ್ಲ. ಆಕಸ್ಮಿಕವಾಗಿ ನಾನು ಮುಖ್ಯಮಂತ್ರಿ ಆದೆ~ ಎಂದ ಅವರು, `ಜೆಡಿಎಸ್ ರೈತರು, ಗ್ರಾಮೀಣ ಪ್ರದೇಶದವರಿಗೆ ಮಾತ್ರ ಸೀಮಿತವಾದ ಪಕ್ಷವಲ್ಲ. ಬೆಂಗಳೂರಿನ ಅಭಿವೃದ್ಧಿಗೂ ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಕೊಡುಗೆ ನೀಡಿದೆ~ ಎಂದು ಹೇಳಿದರು.

ರಾಜ್ಯದಲ್ಲಿ ರಾಜಕಾರಣಿಗಳು ತಲೆತಗ್ಗಿಸುವಂತಾಗಲು ಯಡಿಯೂರಪ್ಪ ಸರ್ಕಾರವೇ ಕಾರಣ. ಯುವಕರು, ಮಹಿಳೆಯರು, ರೈತರ ಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಜನರ ಕುರಿತು ಕಾಳಜಿಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.

ರಾಜ್ಯದ 23 ಜಿಲ್ಲೆಗಳಲ್ಲಿ ಯುವ ಸಮಾವೇಶ ಆಯೋಜಿಸಲಾಗಿದೆ. ಇನ್ನುಳಿದಿರುವ ಏಳು ಜಿಲ್ಲೆಗಳಲ್ಲಿ ಮುಂದಿನ ಹತ್ತು ದಿನಗಳಲ್ಲಿ ಸಮಾವೇಶ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ನಟಿ ಮಾಳವಿಕಾ ಅವಿನಾಶ್ ಮಾತನಾಡಿ, `ಪಕ್ಷದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಶ್ರಮ ವಹಿಸುತ್ತೇನೆ~ ಎಂದರು. ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ, ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಂ.ಎಸ್. ನಾರಾಯಣ ರಾವ್, ಯುವ ಜನತಾದಳದ ಬೆಂಗಳೂರು ಘಟಕದ ಅಧ್ಯಕ್ಷ ಟಿ.ಎನ್. ಹರೀಶ್‌ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.