ಬೆಂಗಳೂರು: ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧದ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಭದ್ರಾವತಿಯ ಸಿ.ಎಸ್. ಶಿವಮೂರ್ತಿ ಎಂಬುವರು ನೀಡಿದ್ದ ದೂರು ಆಧರಿಸಿ, ಶಿವಮೊಗ್ಗದ ಲೋಕಾಯುಕ್ತ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು.
ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಗೇರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ನಡೆಸಿದರು.
ಸರ್ಕಾರದ ಇಲಾಖೆಗಳಿಗೆ ಬೇಕಿರುವ ಮುದ್ರಣ ಕಾಗದಗಳನ್ನು ಮೈಸೂರು ಪೇಪರ್ ಮಿಲ್‌ನಿಂದ ಖರೀದಿಸಬೇಕು ಎಂದು 2009ರಲ್ಲಿ ಆದೇಶಿಸಲಾಗಿದೆ. ಆದರೆ ಕಾಗೇರಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದಾಗ ಈ ನಿಯಮ ಉಲ್ಲಂಘಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿತರಿಸಲು ಪುಣೆ ಮೂಲದ `ಬಾಫ್ನಾ ಎಕ್ಸ್‌ಪೋರ್ಟ್ ಕಂಪೆನಿ'ಯಿಂದ ನೋಟ್ ಬುಕ್ ಖರೀದಿ ಮಾಡಿದ್ದಾರೆ. ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಶಿವಮೂರ್ತಿ ದೂರು ದಾಖಲಿಸಿದ್ದರು.
ಕಾಗೇರಿ ಪರ ಹಾಜರಾದ ಹಿರಿಯ ವಕೀಲ ಕೆ.ಎಂ. ನಟರಾಜ್, `ಕಾನೂನು ಬದ್ಧವಾಗಿ ಟೆಂಡರ್ ಕರೆಯಲಾಗಿತ್ತು. ಅತ್ಯಂತ ಕಡಿಮೆ ದರ ನಮೂದಿಸಿದ ಕಂಪೆನಿಗೆ ಟೆಂಡರ್ ನೀಡಲಾಗಿದೆ. ರಾಜಕೀಯ ಉದ್ದೇಶದಿಂದ ದೂರು ದಾಖಲು ಮಾಡಲಾಗಿದೆ' ಎಂದು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.