ಗೋಣಿಕೊಪ್ಪಲು: ಐದು ದಿನಗಳಿಂದ ಉರಿಯುತ್ತಿದ್ದ ಮಾವ್ಕಲ್ ಹಾಗೂ ದೇವಮಚ್ಚಿ ಅರಣ್ಯದ ಬೆಂಕಿ ತುಸು ತಹಬಂದಿಗೆ ಬಂದಿದೆ. ಆದರೆ, ದೇವಮಚ್ಚಿ ಅರಣ್ಯದ ಬೆಂಕಿ ಭದ್ರಗೋಳದ ಸುಮನ್ ಅವರ ಕಾಫಿತೋಟಕ್ಕೆ ಬುಧವಾರ ಹರಡಿ ಸುಮಾರು 2 ಎಕರೆಯಷ್ಟು ಕಾಫಿ ತೋಟ ನಾಶವಾಗಿದೆ.
ತೋಟದಲ್ಲಿದ್ದ ಕಾಫಿ ಗಿಡ, ಮೆಣಸು ಬಳ್ಳಿಗಳು ಬೆಂಕಿಗೆ ಆಹುತಿಯಾಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ತೋಟಕ್ಕೆ ಹರಡಿದ್ದ ಬೆಂಕಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಗುರುವಾರ ಸಂಪೂರ್ಣವಾಗಿ ನಂದಿಸಿದರು.
ಅತ್ತ ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಅರಣ್ಯದಲ್ಲಿನ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಒಣಗಿದ ಮರಗಳಿಗೆ ಹತ್ತಿರುವ ಬೆಂಕಿ ಈಗಲೂ ಉರಿಯುತ್ತಿದೆ. ಆದರೆ, ಬೇರೆ ಕಡೆಗೆ ಹರಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರ ವಹಿಸಿದೆ. ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಅರಣ್ಯದ ಅಂಚಿನಲ್ಲಿ ಪಹರೆ ನಡೆಸುತ್ತಿದ್ದು, ಅರಣ್ಯಕ್ಕೆ ಬೆಂಕಿ ಕೊಡುವ ಕಿಡಿಗೇಡಿಗಳ ಮೇಲೆ ನಿಗಾ ವಹಿಸಿದ್ದಾರೆ.
ಡಿಸಿಎಎಫ್ ಮಾಲತಿಪ್ರಿಯ ಅವರ ಸೂಚನೆಯಂತೆ ತಿತಿಮತಿ ಎಸಿಎಫ್ ಕಾರ್ಯಪ್ಪ, ಆರ್ಎಫ್ಒ ಗೋಪಾಲ್ ಹಾಗೂ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ. ಇತ್ತಕುಟ್ಟ ಸಮೀಪದ ಕೇರಳ ಗಡಿಭಾಗದ ಅರಣ್ಯಕ್ಕೂ ಕಾಳ್ಗಿಚ್ಚು ಹರಡಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಕೊಡಗು ಮತ್ತು ಕೇರಳ ಗಡಿಭಾಗದ ಅರಣ್ಯದ ತೋಲ್ಪಟ್ಟಿ ಎಂಬಲ್ಲಿ ಕಾಳ್ಗಿಚ್ಚು ಈಗಲೂ ಶಮನವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.