ADVERTISEMENT

ಕಾಮೆಡ್ ಕೆ ರ್‍ಯಾಂಕಿಂಗ್ ರಾಜ್ಯದ ಮೇಲುಗೈ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST
ಅಭಿಜಿತ್ ಶೆಣೈ ಹಾಗೂ ಎನ್‌ಡಿಕೆ ಶಶಿಧರ್
ಅಭಿಜಿತ್ ಶೆಣೈ ಹಾಗೂ ಎನ್‌ಡಿಕೆ ಶಶಿಧರ್   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್ -ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಕರ್ನಾಟಕ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಹತ್ತು ರ್‍ಯಾಂಕ್‌ಗಳು ಮತ್ತು ವೈದ್ಯಕೀಯ, ದಂತ ವೈದ್ಯಕೀಯ ವಿಭಾಗದ ಮೊದಲ ಹತ್ತರಲ್ಲಿ ಪೈಕಿ ಮೂರು ರ್‍ಯಾಂಕ್‌ಗಳು ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ ಎಂದು ಕಾಮೆಡ್ - ಕೆ ಪ್ರಕಟಣೆ ತಿಳಿಸಿದೆ.

ವೈದ್ಯಕೀಯ ವಿಭಾಗದಲ್ಲಿ ಕೇರಳದ ಎನ್.ಡಿ.ಕೆ.ಶಶಿಧರ್ ಮೊದಲ ರ್‍ಯಾಂಕ್ ಪಡೆದಿದ್ದರೆ, ಬೆಂಗಳೂರಿನ ಹೇಮಂತ್ ಅಮರ್‌ದೀಪ್ ಸಂತೂರ್ ಎರಡನೇ ರ್‍ಯಾಂಕ್ ಹಾಗೂ ಹರಿಣಿ ಶೇಷಾದ್ರಿ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಅಭಿಜಿತ್ ಶೆಣೈ    ಮೊದಲ ರ್‍ಯಾಂಕ್ ಹಾಗೂ ಸುಚೇತ್ ಎಸ್ ಕುಂಚಮ್ ಎರಡನೇ  ರ್‍ಯಾಂಕ್ ಪಡೆದಿದ್ದರೆ, ಮೈಸೂರಿನ ಪ್ರತೀಕ್ ಎಂ ಸಾದರೆ ತೃತೀಯ ರ್‍ಯಾಂಕ್ ಪಡೆದಿದ್ದಾರೆ.

ಮೊದಲ 50 ರ್‍ಯಾಂಕ್‌ಗಳಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ 44 ಮಂದಿ ಹಾಗೂ ವೈದ್ಯಕೀಯ, ದಂತ ವೈದ್ಯಕೀಯದಲ್ಲಿ 22 ಮಂದಿ ಕರ್ನಾಟಕದವರಾಗಿದ್ದಾರೆ. ಅದೇ ರೀತಿ ಮೊದಲ ರ್‍ಯಾಂಕ್‌ಗಳನ್ನು ಗಣನೆಗೆ ತೆಗೆದುಕೊಂಡರೆ ಎಂಜಿನಿಯರಿಂಗ್ ವಿಭಾಗದಲ್ಲಿ 85 ಮಂದಿ ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ವಿಭಾಗದಲ್ಲಿ 41 ಮಂದಿ ಕರ್ನಾಟಕಕ್ಕೆ ಸೇರಿದವರು.

ವೈದ್ಯಕೀಯ, ದಂತ ವೈದ್ಯಕೀಯ ವಿಭಾಗದಲ್ಲಿ ಕರ್ನಾಟಕದ ಶೇ 28ರಷ್ಟು ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಕಳೆದ ವರ್ಷ 3,284 ಮಂದಿ ಅರ್ಹರಾಗಿದ್ದರೆ. ಈ ವರ್ಷ 4,397 ಅಭ್ಯರ್ಥಿಗಳು ಸೀಟು ಆಯ್ಕೆಗೆ ಅರ್ಹರಾಗಿದ್ದಾರೆ. ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯದ ಶೇ 39ರಷ್ಟು ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಕಳೆದ ವರ್ಷ 16,782 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರೆ, ಈ ವರ್ಷ 15,913 ಮಂದಿ ಸೀಟು ಆಯ್ಕೆ ಮಾಡಿಕೊಳ್ಳುವ ಅವಕಾಶ ಪಡೆದಿದ್ದಾರೆ.

ಕಾಮೆಡ್ ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಟ್ಟು 82,262 ಮಂದಿ ಹಾಜರಾಗಿದ್ದರು. ಈ ಪೈಕಿ ವೈದ್ಯಕೀಯ, ದಂತ ವೈದ್ಯಕೀಯ ವಿಭಾಗದಲ್ಲಿ 40,578 ಮಂದಿ ಪರೀಕ್ಷೆ ಬರೆದಿದ್ದು, 16,695 ಮಂದಿ ಅರ್ಹತೆ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅರ್ಹತೆ ಪಡೆದವರ ಸಂಖ್ಯೆ 7560ಕ್ಕೂ ಅಧಿಕವಾಗಿದೆ.

ಎಂಜಿನಿಯರಿಂಗ್‌ನಲ್ಲಿ 41,684 ಮಂದಿ ಪರೀಕ್ಷೆ ಬರೆದಿದ್ದರು. ಎಲ್ಲರೂ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಕಾಮೆಡ್ ಕೆ ಮುಖ್ಯಕಾರ್ಯನಿರ್ವಾಹಕ ಎ.ಎಸ್.ಶ್ರೀಕಾಂತ್ ತಿಳಿಸಿದ್ದಾರೆ. ಕಾಮೆಡ್ ಕೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ. ಜುಲೈ ಎರಡನೇ ವಾರದಲ್ಲಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.