ಬೆಂಗಳೂರು: ‘ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಅನುಮತಿ ಇಲ್ಲದೆ ನನ್ನ ರಚನೆಯ ಗೀತೆಯನ್ನು ಅವರ ‘ನಾಗಮಂಡಲ’ ನಾಟಕ ಕೃತಿಯಲ್ಲಿ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಗೋಪಾಲ್ ವಾಜಪೇಯಿ ದೂರಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ದೂರು ದಾಖಲಿಸಲಾಗಿದ್ದು, ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಲಯವು ಮಾರ್ಚ್ 6ರಂದು ಸಾಹಿತಿ ಕಾರ್ನಾಡ್, ಕೃತಿ ಪ್ರಕಟಿಸಿರುವ ಮನೋಹರ್ ಗ್ರಂಥಮಾಲಾ ಪ್ರಕಾಶನದ ರಮಾಕಾಂತ ಜಿ.ಜೋಶಿ, ಪ್ರಕಾಶನದ ವ್ಯವಸ್ಥಾಪಕ ಸಮೀರ್ ಆರ್.ಜೋಶಿ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿಸಿದರು.
‘ಗಿರೀಶ್ ಕಾರ್ನಾಡ್ ಅವರ ನಾಗಮಂಡಲ ನಾಟಕವನ್ನು ಶಂಕರ್ನಾಗ್ ರಂಗಕ್ಕೆ ತರುವಾಗ ನಾಟಕಕ್ಕಾಗಿ ನನ್ನಿಂದ ಹತ್ತು ಗೀತೆಗಳನ್ನು ಬರೆಸಿದ್ದರು. ಗೀತೆಗಳು ಜನಪ್ರಿಯಾದ ಮೇಲೆ ಕಾರ್ನಾಡ್ ಅವರು ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ‘ಮಾಯಾದೊ ಮನದ ಭಾರ’ ಗೀತೆಯನ್ನು ಕೃತಿಯ ಮುಂದಿನ ಎಲ್ಲ ಆವೃತ್ತಿಗಳಲ್ಲಿ ಕೇವಲ ₨1,500ಕ್ಕೆ ಬಳಸಿಕೊಳ್ಳಲು ಅನುಮತಿ ಪಡೆದಿದ್ದರು’ ಎಂದು ತಿಳಿಸಿದರು.
‘2005ರಲ್ಲಿ ಬಂದ ಕೃತಿಯ 2ನೇ ಆವೃತ್ತಿಯಲ್ಲಿ ಗೀತೆಯನ್ನು ಬಳಸಿಕೊಂಡು ನನ್ನ ಹೆಸರು ಹಾಕಿರಲಿಲ್ಲ. 2008ರಲ್ಲಿ ತಿಳಿದು ಗಿರೀಶ್ ಕಾರ್ನಾಡ್ ಅವರನ್ನು ಕೇಳಿದಾಗ ಕಣ್ತಪ್ಪಿನಿಂದ ಆಗಿದೆ ಎಂದು ಹೇಳಿದರು. ಆಗ ಗೀತೆಯನ್ನು ಬಳಸಿಕೊಳ್ಳಲು ನೀಡಿದ್ದ ಅನುಮತಿಯನ್ನು ಹಿಂಪಡೆದು ಅವರು ನೀಡಿದ್ದ ₨1,500 ಚೆಕ್‌ನ್ನು ಹಿಂತಿರುಗಿಸಿದ್ದೇನೆ. ಆದರೂ 2009ರಲ್ಲಿ ಬಂದ ಸಮಗ್ರ ನಾಟಕ ಸಂಪುಟ, 2012ರಲ್ಲಿ ಪ್ರಕಟಗೊಂಡ ಕೃತಿಯ ಮರು ಆವೃತ್ತಿಗಳಲ್ಲಿ ಗೀತೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು. ಅನುಮತಿ ಹಿಂಪಡೆದ ನಂತರವೂ ಗೀತೆಗಳನ್ನು ಬಳಸಿಕೊಂಡಿರುವುದರಿಂದ ₨10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.