ADVERTISEMENT

ಕಾಲುಬಾಯಿ ರೋಗ: 456 ರಾಸು ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಕಾಲು ಬಾಯಿ ಜ್ವರದಿಂದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಆಗಸ್ಟ್‌ ನಿಂದ ಸೆಪ್ಟೆಂಬರ್‌ 25ರ ವರೆಗೆ 456 ರಾಸುಗಳು ಮೃತಪಟ್ಟಿವೆ.

ಈ ವರೆಗೆ 186 ಹಸುಗಳು, 12 ಎಮ್ಮೆಗಳು, ಪಡ್ಡೆಗಳು (ಆರು ತಿಂಗಳು ಮೇಲಿನ ಕರುಗಳು) 67 ಹಾಗೂ 197 ಕರುಗಳು ಮೃತಪಟ್ಟಿವೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಗುರುಲಿಂಗಯ್ಯ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ 12 ತಾಲ್ಲೂಕುಗಳಲ್ಲಿ 1,919 ಹಾಲು ಉತ್ಪಾದಕ ಸಂಘಗ ಳಿವೆ. 5.76 ಲಕ್ಷ ಜಾನುವಾ ರುಗಳಿವೆ. 354 ಸಂಘಗಳ ವ್ಯಾಪ್ತಿಯಲ್ಲಿ ಕಾಯಿಲೆ ಹರಡಿದ್ದು, 5,791 ರಾಸುಗಳು ಕಾಯಿ ಲೆಪೀಡಿತವಾಗಿವೆ. ಕಾಯಿಲೆ ನಿಯಂತ್ರಣಕ್ಕೆ ತಂದು ಹರಡದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ಒಂದೂವರೆ ತಿಂಗಳಿಂದ ರಾಜ್ಯದಾ ದ್ಯಂತ ಕಾಯಿಲೆ ಹರ ಡುತ್ತಿದ್ದು, ದಕ್ಷಿಣದ ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ದಕ್ಷಿಣದಲ್ಲಿ ಹೈನುಗಾರಿಕೆ ಪ್ರಮಾಣ ಜಾಸ್ತಿ ಇರುವುದು ಇದಕ್ಕೆ ಕಾರಣ. ಅಧಿಕ ಹಾಲು ನೀಡುವ ಮಿಶ್ರ ತಳಿಯ ರಾಸುಗಳಲ್ಲಿ ಬೇಗ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಬಗ್ಗೆ ಕೆಎಂಎಫ್‌, ಪಶು ವೈದ್ಯಕೀಯ ಇಲಾಖೆಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮಕ್ಕೆ ಹಣಕಾಸಿನ ಕೊರತೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಕಾಯಿಲೆ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಚನ್ನಪಟ್ಟಣ ಶಿಬಿರಕ್ಕೆ ಒಂದು ತಿಂಗಳ ಅವಧಿಗೆ ಒಂದು ಹೆಚ್ಚಿನ ವಾಹನ ವ್ಯವಸ್ಥೆ, ಮಾಗಡಿ, ಹೊಸಕೋಟೆ, ಬೆಂಗಳೂರು ದಕ್ಷಿಣ ಹಾಗೂ ನೆಲಮಂಗಲ ತಾಲ್ಲೂಕಿನ ಶಿಬಿರಗಳಿಗೆ ಒಂದು ವಾಹನ ವ್ಯವಸ್ಥೆ, ಒಬ್ಬರು ಪಶು ವೈದ್ಯಾಧಿಕಾರಿಯನ್ನು ಶಾಶ್ವತವಾಗಿ ನೇಮಿಸಲು ನಿರ್ಧರಿಸ ಲಾಗಿದೆ ಎಂದರು.

ಕಾಯಿಲೆ ಕಾಣಿಸಿರುವ ಗ್ರಾಮಗಳಲ್ಲಿ ನರಳುತ್ತಿರುವ ಎಲ್ಲ ರಾಸುಗಳಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುವುದು. 24 ಗಂಟೆಗಳ ಕಾಲವೂ ಪಶು ವೈದ್ಯಾಧಿಕಾರಿಗಳ ಸೇವೆ ಲಭ್ಯವಾಗುವಂತೆ ಶಿಬಿರಗಳನ್ನು ನಡೆಸಲಾಗುತ್ತಿದೆ. ರೋಗ ಹರಡುವಿಕೆ ಶಮನ ಆಗುವ ವರೆಗೆ ಪಶು ವೈದ್ಯಾಧಿಕಾರಿಗಳಿಗೆ ರಜೆ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ‘ರಾಸುಗಳಿಗೆ ಜೀವವಿಮೆ ಮಾಡಿಸಲಾಗಿದೆ. ಒಕ್ಕೂಟವು ವಾರ್ಷಿಕ ₨120 ಹಾಗೂ ರೈತರು ₨120 ಜೀವವಿಮಾ ಪ್ರೀಮಿಯಂ ಮೊತ್ತ ಪಾವತಿಸಬೇಕು. 2012–13ನೇ ಸಾಲಿನಲ್ಲಿ ₨7.38 ಕೋಟಿ ಪ್ರೀಮಿಯಂ ಕಟ್ಟಲಾಗಿದೆ’ ಎಂದರು.

‘ರಾಸು ಮೃತಪಟ್ಟಾಗ ₨40 ಸಾವಿರ ಜೀವವಿಮೆ ದೊರಕುತ್ತದೆ. ಆದರೆ, ಮಿಶ್ರ ತಳಿಯ ರಾಸುವಿನ ಬೆಲೆ ₨70 ಸಾವಿರ ಇರುತ್ತದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಒಕ್ಕೂಟದ ಕಲ್ಯಾಣ ನಿಧಿಯಿಂದ ಹಸುಗಳಿಗೆ ₨10 ಸಾವಿರ, ಮೂರು ತಿಂಗಳ ಮೇಲಿನ ಪಡ್ಡೆಗಳಿಗೆ ₨ 6 ಸಾವಿರ ಹಾಗೂ ಇದಕ್ಕಿಂತ ಚಿಕ್ಕ ಪಡ್ಡೆಗಳಿಗೆ ₨3 ಸಾವಿರ ನೀಡಲಾಗುತ್ತದೆ. ಅಕ್ಟೋಬರ್‌ 30ರ ವರೆಗೆ ಈ ಯೋಜನೆ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

‘ಕಾಯಿಲೆ ಹರಡುವುದರಲ್ಲಿ ಹೈನುಗಾರರ ನಿರ್ಲಕ್ಷ್ಯವೂ ಇದೆ. ಕಾಯಿಲೆಯಿಂದ ರಾಸು ಮೃತಪಟ್ಟಾಗ ಸರಿಯಾಗಿ ಹೂಳುವುದಿಲ್ಲ. ಕೆರೆ ಮತ್ತಿತರ ಕಡೆಗಳಲ್ಲಿ ಎಸೆಯಲಾಗುತ್ತದೆ. ಇದರಿಂದ ಕಾಯಿಲೆ ವೇಗವಾಗಿ ಹರಡುತ್ತದೆ. ಈ ನಿಟ್ಟಿನಲ್ಲಿ ರೈತರು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಹರಡುವುದು ಹೇಗೆ?
ಈ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಜಾನುವಾ ರು ಗಳಿಗೆ ಮಾರಕವಾಗಿದೆ. ಇದು ಅತೀ  ಬೇಗನೆ ಹರಡುತ್ತದೆ. ಈ ಕಾಯಿಲೆಯು ರಾಸುಗಳ ಚಲನವ ಲನದಿಂದ ಹಾಗೂ ದನಗಳ ಜಾತ್ರೆ ಗಳಲ್ಲಿ ಅತೀ ಬೇಗನೆ ರಾಸುವಿನಿಂದ ರಾಸುವಿಗೆ ಹರಡುತ್ತದೆ. ಪಕ್ಷಿಗಳು, ಹೈನುಗಾರಿಕೆಯಲ್ಲಿ ತೊಡಗಿರು ವವರು, ನೀರು, ಮೇವು, ಗಾಳಿ ಹಾಗೂ ವಾಹನಗಳ ಮೂಲಕವೂ ಶೀಘ್ರವಾಗಿ ಹರಡುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ರಾಸುಗಳಿಗೆ ಏನಾಗುತ್ತದೆ?
ಕಾಯಿಲೆ ಬಂದ ರಾಸುಗಳಲ್ಲಿ ಮೊದಲು ಜ್ವರ ಕಾಣಿಸಿಕೊಂಡು ಜೊಲ್ಲು ಸುರಿಸುತ್ತ ಮೇವು ತಿನ್ನು ವುದನ್ನು ನಿಲ್ಲಿಸುತ್ತವೆ. ಇಳುವರಿ ಕಡಿಮೆಯಾಗಿ ಗೊರಸುಗಳಲ್ಲಿ ಹುಣ್ಣು ಕಾಣಿಸಿಕೊಂಡು ಕುಂಟು ತ್ತವೆ. ಬಾಯಿಗಳಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗಿ ಒಡೆದು ಗಾಯ ಗಳಾಗಿ ಮಾರ್ಪಾಡಾ ಗುವುದಲ್ಲದೆ ಒಮ್ಮೊಮ್ಮೆ ನಾಲಿಗೆಯ ಮೇಲೆ ಹುಣ್ಣು ಜಾಸ್ತಿ ಯಾಗಿ ಅದರ ಮೇಲೆ ಪದರ ಕಿತ್ತು ರಕ್ತಸ್ರಾವವಾಗುವುದು.
ಕೆಲವು ರಾಸುಗಳಲ್ಲಿ ಕೆಚ್ಚಲಿನ ಮೇಲೆ ಗುಳ್ಳೆಗಳಾಗಿ ಹುಣ್ಣಾಗುವುದು. ಗರ್ಭದ ರಾಸುಗಳಲ್ಲಿ ಗರ್ಭಪಾತ ವಾಗುವ ಸಾಧ್ಯತೆ ಹೆಚ್ಚಿದೆ. ಈ ರೋಗಕ್ಕೆ ತುತ್ತಾದ ಸಣ್ಣ ಕರುಗಳು ಹಾಗೂ ಪಡ್ಡೆ ಕರುಗಳು ಸಾಯುವ ಸಂಭವ ಜಾಸ್ತಿ ಇದೆ.

ರೋಗದ ಲಕ್ಷಣಗಳು
ಒಮ್ಮೊಮ್ಮೆ ಕಾಲು ಬಾಯಿ ಜ್ವರದ ಜೊತೆಯಲ್ಲಿ ಗಳಲೆ ರೋಗ (ಹಂದಿ ಜಾಡ್ಯ)ವೂ ಒಟ್ಟಿಗೆ ಕಾಣಿಸಿಕೊಳ್ಳುತ್ತದೆ. ಇದು ಹೈನು ರಾಸುಗಳಿಗೆ ಮಾರಣಾಂತಿಕವಾಗುತ್ತದೆ. ಕಾಲು ಬಾಯಿ ಜ್ವರದ ಲಕ್ಷಣದೊಂದಿಗೆ ಅತೀ ಹೆಚ್ಚಿನ ಉಷ್ಣಾಂಶ  ಮತ್ತು ಉಸಿರಾಟದ ತೊಂದರೆ ಕಂಡು ಬಂದಲ್ಲಿ ಗಳಲೆ ರೋಗಕ್ಕೆ ಸಹಿತ ಒಟ್ಟಿಗೆ ಚಿಕಿತ್ಸೆಯನ್ನು ಕೊಡಿಸಬೇಕು.

ಬನ್ನೇರುಘಟ್ಟ: ಒಟ್ಟು ಏಳು ಪ್ರಾಣಿಗಳ ಸಾವು
ಬೆಂಗಳೂರು
: ಕಾಲುಬಾಯಿ ರೋಗದ ಸೋಂಕಿಗೆ ತುತ್ತಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಾಹಾರಿ ಸಫಾರಿ ಪ್ರದೇಶದಲ್ಲಿ ಮತ್ತೆ ಜಿಂಕೆ ಜಾತಿಗೆ ಸೇರಿದ ನಾಲ್ಕು ಪ್ರಾಣಿಗಳು ಸತ್ತಿದ್ದು, ಇದರಿಂದಾಗಿ ಸಾವಿನ ಸಂಖ್ಯೆ ಏಳಕ್ಕೆ ಏರಿದೆ.

ಬುಧವಾರ ಸಂಜೆಯಿಂದ ಗುರುವಾರದೊಳಗೆ ಎರಡು ಸಾಂಬಾರ ಜಿಂಕೆ ಹಾಗೂ ಎರಡು ನೀಲಘಾಯ್‌ ಸತ್ತಿವೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ರಂಗೇಗೌಡ ತಿಳಿಸಿದ್ದಾರೆ. ಸೆ.22ರಂದು ಎರಡು ಚುಕ್ಕೆ ಜಿಂಕೆ ಹಾಗೂ ನೀಲಘಾಯ್‌ ಸತ್ತಿದ್ದವು.
ರೋಗಕ್ಕೆ ತುತ್ತಾಗಿದ್ದ ಕಾಡೆಮ್ಮೆಗಳು ಅಪಾಯದಿಂದ ಪಾರಾಗಿದ್ದು, ಅವುಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ನೀಲಘಾಯ್‌ಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ.

ಹುಲಿ ಅಭಯಾರಣ್ಯಗಳಾದ ಬಂಡೀಪುರ, ನಾಗರಹೊಳೆಯ ಆಸುಪಾಸಿನಲ್ಲಿ ಮೂರು ತಿಂಗಳ ಹಿಂದೆಯೇ ಕಾಲುಬಾಯಿ ರೋಗದ ಲಸಿಕೆ ಹಾಕಲಾಗಿದೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ಯಾವುದೇ ಅಪಾಯವಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜಿ.ಎಸ್‌.ಪ್ರಭು ತಿಳಿಸಿದ್ದಾರೆ.

ಜ್ವರದ ನಿಯಂತ್ರಣ ಕ್ರಮಗಳು
ವೈರಾಣು ವೃದ್ಧಿಯಾಗುವುದನ್ನು ತಡೆಯಲು ಐದು ಟೀ ಸ್ಪೂನ್‌ ವಾಷಿಂಗ್‌ ಸೋಡಾವನ್ನು ಒಂದು ಲೀಟರ್‌ ನೀರಿನಲ್ಲಿ ಬೆರಸಿ ದ್ರಾವಣ ಮಾಡಿಕೊಂಡು ಕಾಯಿಲೆ ಪೀಡಿತ ರಾಸುಗಳ ಕೊಟ್ಟಿಗೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸಿಂಪಡಿಸಿದರೆ ಕಾಯಿಲೆ ಹರಡುವಿಕೆಯನ್ನು ತಡೆಗಟ್ಟಬಹುದು.

ಕಾಯಿಲೆಪೀಡಿತ ರಾಸುಗಳ ಬಾಯನ್ನು ಶೇ 0.1 ಪೊಟಾಶಿಯಂ ಪರಮಾಂಗನೇಟ್‌ ಅಥವಾ ಒಂದು ಲೀಟರ್‌ನಲ್ಲಿ 8 ಟೀ ಸ್ಪೂನ್‌ ಅಡುಗೆ ಸೋಡಾ ಮಿಶ್ರಣ ಮಾಡಿ 2ರಿಂದ 3 ಬಾರಿ ತೊಳೆಯಬೇಕು. ಕಾಯಿಲೆಯಿಂದ ನರಳುತ್ತಿರುವ ಹಸುಗಳ ಹಾಲನ್ನು ಕರುಗಳಿಗೆ ಕುಡಿಸಬಾರದು ಹಾಗೂ ಕರುಗಳನ್ನು ಪ್ರತ್ಯೇಕಿಸಬೇಕು.

ನಾಟಿ ಚಿಕಿತ್ಸೆ ಪದ್ಧತಿಯಂತೆ ಒಂದು ಹಿಡಿ ಜೀರಿಗೆ, ಮೆಂತ್ಯೆ ಮತ್ತು ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ಉಂಡೆ ಮಾಡಿ ನರಳುತ್ತಿರುವ ರಾಸುಗಳಿಗೆ ದಿನಕ್ಕೊಮ್ಮೆ ನೀಡಿದರೆ ಶೀಘ್ರ ಗುಣಮುಖವಾಗಲು ಅನುಕೂಲವಾಗುತ್ತದೆ. ರಾಸುಗಳಲ್ಲಿ ಬಾಯಿ ಹುಣ್ಣಾಗಿರುವುದರಿಂದ ಮಾಗಿರುವ ಬಾಳೆಹಣ್ಣು, ಕೊತ್ತಂಬರಿ ಸೊಪ್ಪು ಹಾಗೂ ಇತರ ಮೃದು ಆಹಾರವನ್ನು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.