ADVERTISEMENT

‘ಕಾವೇರಿ: ನಿರ್ವಹಣಾ ಮಂಡಳಿ ಬೇಡ’ : ಕಾಂಗ್ರೆಸ್‌ ಸಂಸದರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆಗೆ ಮುಂದಾಗದೆ, ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ತಿಳಿಸಿರುವಂತೆ ಯೋಜನೆ (ಸ್ಕೀಂ) ರೂಪಿಸಬೇಕು ಎಂದು ಆಗ್ರಹಿಸಿ ರಾಜ್ಯದ ಕಾಂಗ್ರೆಸ್‌ ಸಂಸದರು ಸಂಸತ್‌ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಸ್ಕೀಂ’ ಎಂದರೆ ನಿರ್ವಹಣಾ ಮಂಡಳಿ ಮಾತ್ರವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಆದರೂ, ತಮಿಳುನಾಡು ಸಂಸದರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸುತ್ತ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ, ನಿರ್ವಹಣಾ ಮಂಡಳಿ ರಚನೆ ವಿಚಾರ ಕೈಬಿಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ತುಮಕೂರು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಆಗ್ರಹಿಸಿದರು.

ಸಂಸದರಾದ ಎನ್‌.ಚಂದ್ರಪ್ಪ, ಡಿ.ಕೆ. ಸುರೇಶ್, ಕೆ.ಸಿ. ರಾಮಮೂರ್ತಿ, ಬಿ.ವಿ. ನಾಯಕ್ ಸಂಸತ್‌ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಇದಕ್ಕೂ ಮೊದಲು ಇದೇ ಸ್ಥಳದಲ್ಲಿ ತಮಿಳುನಾಡಿನ ಎಐಎಡಿಎಂಕೆ ಸಂಸದರು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.