ADVERTISEMENT

‘ಕೀಳು ಮಟ್ಟದ ಭಾಷೆ ಪ್ರಧಾನಿ ಘನತೆಗೆ ತಕ್ಕುದಲ್ಲ’

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:30 IST
Last Updated 7 ಮೇ 2018, 19:30 IST
‘ಕೀಳು ಮಟ್ಟದ ಭಾಷೆ ಪ್ರಧಾನಿ ಘನತೆಗೆ ತಕ್ಕುದಲ್ಲ’
‘ಕೀಳು ಮಟ್ಟದ ಭಾಷೆ ಪ್ರಧಾನಿ ಘನತೆಗೆ ತಕ್ಕುದಲ್ಲ’   

ಬೆಂಗಳೂರು: ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮತಗಳ ಧ್ರುವೀಕರಣಕ್ಕಾಗಿ ಕೀಳು ಮಟ್ಟದ ಭಾಷೆ ಬಳಸುತ್ತಿರುವುದು ಆ ಹುದ್ದೆಯ ಘನತೆಗೆ ತಕ್ಕ ವರ್ತನೆಯಲ್ಲ ಎಂದು ಮಾಜಿ ‍ಪ್ರಧಾನಿ ಮನಮೋಹನ ಸಿಂಗ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಚುನಾವಣೆ ನಡೆದ ಎಲ್ಲ ರಾಜ್ಯಗಳಲ್ಲೂ ಸಮಾಜ ವಿಭಜಿಸುವ ಇಂತಹ ಮಾತುಗಳನ್ನು ಪ್ರಧಾನಿ ಆಡುತ್ತಲೇ ಬಂದಿದ್ದಾರೆ. ಇಂತಹ ನಡವಳಿಕೆ ದೇಶ ಮತ್ತು ರಾಜ್ಯಕ್ಕೆ ಒಳಿತು ಮಾಡುವುದಿಲ್ಲ. ಇನ್ನು ಮುಂದಾದರೂ ಅವರು ತಪ್ಪು ತಿದ್ದಿಕೊಳ್ಳುತ್ತಾರೆ ಎಂದು ನಂಬಿದ್ದೇನೆ’ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ರಾಷ್ಟ್ರ ಸಂಕಷ್ಟಕ್ಕೆ ಸಿಲುಕಿದೆ. ಭಾರಿ ಮುಖಬೆಲೆ ನೋಟುಗಳ ರದ್ದು, ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಹೇರಿದ್ದು ಆರ್ಥಿಕ ಹಿನ್ನಡೆಗೆ ಕಾರಣ. ಇದರಿಂದಾಗಿ ಬ್ಯಾಂಕಿಂಗ್‌ ವಲಯದ ಮೇಲೆ ಜನರಿಗೆ ಇದ್ದ ವಿಶ್ವಾಸವೇ ಕುಸಿದು ಹೋಗಿದೆ ಎಂದರು.

ADVERTISEMENT

2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ವಾಗ್ದಾನ ಮಾಡಿದ್ದರು. ನಾಲ್ಕು ವರ್ಷಗಳಲ್ಲಿ 15ರಿಂದ 24 ವರ್ಷದೊಳಗಿನ 72 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿ ಅವರ ಅಸಮರ್ಪಕ ಆಡಳಿತವೇ ಇದಕ್ಕೆ ಕಾರಣ ಎಂದು ಅವರು ದೂರಿದರು.

ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯೇ ಮೋದಿ ಆಡಳಿತದ ದೊಡ್ಡ ದೌರ್ಬಲ್ಯ. ವಾರಂಟ್‌ ಇಲ್ಲದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದರಿಂದ ಉದ್ಯಮಿಗಳು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

* 2013ರಲ್ಲಿ ನಮ್ಮ ಸರ್ಕಾರ ಇದ್ದಾಗ ವಸೂಲಾಗದ ಸಾಲದ ಮೊತ್ತ (ಎನ್‌ಪಿಎ) 28,416 ಕೋಟಿ ಇತ್ತು. 2017ರಲ್ಲಿ ಈ ಮೊತ್ತ 1.1 ಲಕ್ಷ ಕೋಟಿಗೆ ಏರಿಕೆಯಾಗಿದೆ. ವಂಚನೆಗಳ ಸಂಚುಕೋರರು ಯಾವುದೇ ದಂಡನೆಗೆ ಸಿಗದೇ ಪರಾರಿಯಾಗುತ್ತಿದ್ದಾರೆ.

* ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ 67ರಷ್ಟು ಇಳಿಕೆಯಾಗಿದೆ. ಆದರೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಶೇ 110ರಷ್ಟು ಏರಿಕೆಯಾಗಿದೆ.

* ಗ್ರಾಮೀಣ ಆರ್ಥಿಕತೆ ಕುಸಿದುಹೋಗಿದೆ. ರೈತರ ಸಾಲ ಮನ್ನಾ ಮಾಡಲು ಕೇಂದ್ರ ಆಸಕ್ತಿ ತೋರಿಲ್ಲ. ಆದರೆ ಮೂರು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ 2.41 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ.

ಸಿದ್ದರಾಮಯ್ಯ ಸಾಧನೆ– ಸಿಂಗ್ ಬಣ್ಣನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಲನಶೀಲ ನಾಯಕತ್ವದ ಸರ್ಕಾರ ಐದು ವರ್ಷ ಎಲ್ಲರ ಹಿತ ಬಯಸುವ ಆಡಳಿತವನ್ನು ನೀಡಿದೆ, ಉದ್ಯಮ ಸ್ನೇಹಿ ಆಡಳಿತವನ್ನು ಕೊಟ್ಟಿದೆ ಎಂದು ಸಿಂಗ್‌ ಬಣ್ಣಿಸಿದರು.

ಇಡೀ ದೇಶದಲ್ಲಿ ಉದ್ಯೋಗ ನಷ್ಟವಾಗಿದ್ದರೂ ಕರ್ನಾಟಕ ಸರ್ಕಾರ ಉದ್ಯೋಗ ಸೃಷ್ಟಿಸಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಆಡಳಿತ ಇದ್ದಾಗ ವಿಶ್ವದ ಚಲನಶೀಲ ನಗರಗಳ ಪೈಕಿ ಬೆಂಗಳೂರು 12ನೇ ಸ್ಥಾನದಲ್ಲಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 1ನೇ ಸ್ಥಾನಕ್ಕೆ ಏರಿದೆ. ಉದ್ಯಮಿಗಳ ಆಕರ್ಷಣೆ ಹಾಗೂ ಬಂಡವಾಳ ಹೂಡಿಕೆಗಳಲ್ಲಿ ಗುಜರಾತ್ ಅನ್ನು ಕರ್ನಾಟಕ ಹಿಂದಿಕ್ಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.