ADVERTISEMENT

ಕುಡಿಯುವ ನೀರಿಗಾಗಿ ತಾಲ್ಲೂಕಿಗೆ ರೂ 1 ಕೋಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST
ಕುಡಿಯುವ ನೀರಿಗಾಗಿ ತಾಲ್ಲೂಕಿಗೆ ರೂ 1 ಕೋಟಿ
ಕುಡಿಯುವ ನೀರಿಗಾಗಿ ತಾಲ್ಲೂಕಿಗೆ ರೂ 1 ಕೋಟಿ   

ಬೆಂಗಳೂರು: ಬರ ಪರಿಸ್ಥಿತಿ ಎದುರಿಸುತ್ತಿರುವ 123 ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಕೆಗೆ ತಲಾ ಒಂದು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಬುಧವಾರ ಬರ ಪರಿಸ್ಥಿತಿ ಮತ್ತು ಪರಿಹಾರ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಬರಪೀಡಿತ ಎಂದು ಘೋಷಿಸಿರುವ ಕೆಲ ತಾಲ್ಲೂಕುಗಳ ಅಕ್ಕಪಕ್ಕದ ತಾಲ್ಲೂಕುಗಳಲ್ಲೂ ಕುಡಿಯುವ ನೀರಿನ ಕೊರತೆ ಉದ್ಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತಹ ತಾಲ್ಲೂಕುಗಳಲ್ಲೂ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪುರೈಕೆಗೆ ನಗರಾಭಿವೃದ್ಧಿ ಇಲಾಖೆಗೆ ಪ್ರತ್ಯೇಕವಾಗಿ 40 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು. ಈ ಅನುದಾನವನ್ನು ಬಳಸಿಕೊಂಡು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಇಲಾಖೆಯೇ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಕೇಂದ್ರದಿಂದ ರೂ 282 ಕೋಟಿ: ಬರ ಪರಿಹಾರಕ್ಕೆ 6,215 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಕೇವಲ 282.35 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಮೂರು ದಿನಗಳ ಹಿಂದಷ್ಟೇ ಈ ಮೊತ್ತ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು.

ಬರ ಪರಿಹಾರಕ್ಕೆ ಈವರೆಗೆ 2,193 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ 1,736 ಕೋಟಿ ರೂಪಾಯಿ ವೆಚ್ಚವಾಗಿದೆ. ಜೂನ್ 30ಕ್ಕೆ ಕೊನೆಗೊಂಡಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 139.90 ಕೋಟಿ ರೂಪಾಯಿ ಇತ್ತು. ಬರ ಪರಿಹಾರ ಕಾಮಗಾರಿಗಳಿಗೆ ಯಾವುದೇ ರೀತಿಯಲ್ಲೂ ಹಣದ ಕೊರತೆ ಉದ್ಭವಿಸಿಲ್ಲ ಎಂದು ತಿಳಿಸಿದರು.

ಶೇ 84ರಷ್ಟು ಮಳೆ ಕೊರತೆ: ರಾಜ್ಯದಲ್ಲಿರುವ 747 ಹೋಬಳಿಗಳ ಪೈಕಿ 624 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದೆ. ವಾಡಿಕೆಗೆ ಹೋಲಿಸಿದರೆ ಸರಾಸರಿ ಶೇಕಡ 84ರಷ್ಟು ಮಳೆ ಕೊರತೆಯಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಶೇಕಡ 65ರಷ್ಟು ಕಡಿಮೆ ಮಳೆಯಾಗಿದೆ. ಹೇಮಾವತಿ ಮತ್ತು ಭದ್ರಾ ಜಲಾಶಯಗಳಲ್ಲಿ ಮಾತ್ರ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಉಳಿದ ಎಲ್ಲ ಜಲಾಶಯಗಳಲ್ಲೂ ಹತ್ತು ವರ್ಷಗಳ ಸರಾಸರಿಗಿಂತ ಕಡಿಮೆ ನೀರಿನ ಸಂಗ್ರಹವಿದೆ ಎಂದು ವಿವರ ನೀಡಿದರು.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ 74.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯ ಕೊರತೆಯಿಂದಾಗಿ ಈವರೆಗೂ ಕೇವಲ 10.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿರುವ ಕೆಲ ಪ್ರದೇಶದಲ್ಲೂ ಮಳೆಯ ಕೊರತೆಯಿಂದಾಗಿ ಬೀಜ ಸಂಪೂರ್ಣವಾಗಿ ಮೊಳಕೆಯೊಡೆದಿಲ್ಲ ಎಂದು ತಿಳಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ಏಳು ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ. ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲಾಗಿರುವ 734 ಗೋಶಾಲೆಗಳು ಅತ್ಯುತ್ತಮವಾಗಿ ನಡೆಯುತ್ತಿವೆ ಎಂದರು.

ಸಭೆಗೆ ಸೂಚನೆ: 750 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕುಡಿಯುವ ನೀರು ಪೂರೈಕೆ ಘಟಕಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಆಯಾ ಭಾಗದ ವಿದ್ಯುತ್ ಸರಬರಾಜು ಕಂಪೆನಿಗಳ ಅಧಿಕಾರಿಗಳ ಜೊತೆ ತಕ್ಷಣವೇ ಸಭೆ ನಡೆಸುವಂತೆ ಬರಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

ಆಯಾ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತು ಮತ್ತೊಮ್ಮೆ ಅಧ್ಯಯನ ನಡೆಸಿ ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸಚಿವರು ವಿಭಾಗವಾರು ಪ್ರವಾಸ ಕೈಗೊಳ್ಳುತ್ತಾರೆ. ಬರಪೀಡಿತ ಪ್ರದೇಶಗಳಲ್ಲಿ ಮತ್ತೊಮ್ಮೆ ಅಧ್ಯಯನ ಪ್ರವಾಸ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆದೇಶಿಸಲಾಗಿದೆ ಎಂದರು.

ಇನ್ನೂ ಪರಿಶೀಲನೆಯಲ್ಲಿ: ಮೋಡಬಿತ್ತನೆ ವಿಷಯದಲ್ಲಿ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ಕುರಿತು ಪುಣೆಯ ಭಾರತೀಯ ಉಷ್ಣವಲಯ ಹವಾಮಾನ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಿ.ಎನ್.ಗೋಸ್ವಾಮಿ ಜೊತೆ ಚರ್ಚಿಸಲಾಗಿದೆ. ಮೋಡಬಿತ್ತನೆ ಸಾಧ್ಯತೆ ಕುರಿತ ಅಧ್ಯಯನ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಲಾ ರೂ 2 ಕೋಟಿ ಬಿಡುಗಡೆ
ಹೆಚ್ಚು ಮಳೆ ಬೀಳುತ್ತಿರುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಹಾನಿಗೆ ಪರಿಹಾರ ಒದಗಿಸಲು ಜಿಲ್ಲೆಗೆ ತಲಾ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

`ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಕರಾವಳಿ ತೀರದಲ್ಲಿ ಕಡಲ್ಕೊರೆತ ಸಂಭವಿಸುವ ಅಪಾಯವೂ ಇದೆ. ಈ ಹಿನ್ನೆಲೆಯಲ್ಲಿ ಮಳೆಹಾನಿಗೆ ತಕ್ಷಣ ಪರಿಹಾರ ಒದಗಿಸಲು ತಲಾ ಎರಡು ಕೋಟಿ ರೂಪಾಯಿ ಒದಗಿಸಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.