ADVERTISEMENT

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ

ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಬೆಂಗಳೂರು: ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ತುರ್ತುಪರಿಹಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ತಕ್ಷಣವೇ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಇತರ ಯಾವುದೇ ವಿಷಯಗಳನ್ನು ತೆಗೆದುಕೊಳ್ಳಲಿಲ್ಲ. ಕುಡಿಯುವ ನೀರಿನ ಸಮಸ್ಯೆಯನ್ನು ಏಳರಿಂದ ಎಂಟು ಸಚಿವರು ಪ್ರಸ್ತಾಪಿಸಿದರು. ಆದ್ದರಿಂದ ಆ ವಿಷಯವನ್ನು ಚರ್ಚಿಸಲಾಯಿತು ಎಂದರು.

ADVERTISEMENT

ಬೇಸಿಗೆ ಆರಂಭವಾಗಿದೆ. ಕೊಳವೆ ಬಾವಿ ಕೊರೆಸಬೇಕು. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ  ಮಾಡಬೇಕು. ಸಭೆ ಮಾಡಿ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚಿಸಲಿದ್ದಾರೆ ಎಂದರು.

ರತ್ನಪ್ರಭಾ ಅವಧಿ ವಿಸ್ತರಣೆಗೆ ಪತ್ರ
ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಧಿಕಾರಾವಧಿ ಇದೇ ತಿಂಗಳು ಮುಗಿಯಲಿದ್ದು, ಇನ್ನೂ ನಾಲ್ಕು ತಿಂಗಳು ಸೇವಾವಧಿ ವಿಸ್ತರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಜಯಚಂದ್ರ ಹೇಳಿದರು.

‘ನೀತಿ ಸಂಹಿತೆ ಜಾರಿ ಆಗಿರುವುದರಿಂದ ಕೇಂದ್ರ ಸರ್ಕಾರ ಏನು ಮಾಡುತ್ತದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ವಿಸ್ತರಣೆ ಮಾಡಲು ಆಗುವುದಿಲ್ಲವೆಂದರೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಅವಕಾಶ ಇದೆ’ ಎಂದರು.

ಸಚಿವರಿಗೆ ವಿದಾಯ ಹೇಳಿದ ಮುಖ್ಯಮಂತ್ರಿ!
ಯಾರೂ ಹೆದರಬೇಡಿ, ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಮತ್ತೆ ಗೆಲ್ಲುತ್ತದೆ. ವಿಶ್ವಾಸದಿಂದ ನಿಮ್ಮ ಕ್ಷೇತ್ರಗಳಿಗೆ ಹೋಗಿ ಬನ್ನಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳಿಗೆ ಹುರುಪು ತುಂಬಿ ವಿದಾಯ ಹೇಳಿದರು.

‘ಯಾರ ಬಳಿಯೂ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಬೇಡಿ’ ಎಂದು ಮಂಗಳವಾರ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಹೇಳಿದರು.

‘ನಿಮ್ಮ ಜಿಲ್ಲೆಗಳಲ್ಲಿ ಗೊಂದಲಗಳು ಇದ್ದರೆ ಅಲ್ಲೇ ಬಗೆಹರಿಸಿಕೊಳ್ಳಬೇಕು. ಬೆಂಗಳೂರಿನವರೆಗೆ ಬರಬೇಡಿ. ಸಣ್ಣ ಸಮಸ್ಯೆಗಳನ್ನೇ ದೊಡ್ಡದು ಮಾಡಬೇಡಿ’ ಎಂದೂ ಕಿವಿಮಾತು ಹೇಳಿದರು.

‘ಭಾಷಣ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ. ಎಡವಟ್ಟಿನ ಮಾತುಗಳನ್ನು ಆಡಬೇಡಿ. ನಿಮ್ಮ ದುಡುಕಿನ ಮಾತುಗಳು ವಿರೋಧ ಪಕ್ಷಗಳಿಗೆ ಅಸ್ತ್ರವಾಗಬಹುದು. ಜಾತಿ, ಧರ್ಮದ ವಿಚಾರಗಳಲ್ಲಿ ವಿವಾದ ಸೃಷ್ಟಿಸುವುದು ಬೇಡ’ ಎಂದೂ ಸಲಹೆ ಮಾಡಿದರು.

ಕ್ಷೇತ್ರಗಳಿಗೆ ಅಗತ್ಯವಿದ್ದರೆ ಮಾತ್ರ ದೊಡ್ಡ ನಾಯಕರನ್ನು ಕರೆಸುವ ಪ್ರಸ್ತಾಪವಿಡಿ. ಕೇವಲ ತೋರಿಕೆಗಾಗಿ ಕರೆಸಬೇಡಿ ಎಂದೂ ಸಿದ್ದರಾಮಯ್ಯ ಹೇಳಿದರು.

ಸುಮಾರು ಮುಕ್ಕಾಲು ಗಂಟೆ ಸಂಪುಟದ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಕೆಲವು ಸಚಿವರಿಗಂತೂ ತಾವು ಮತ್ತೆ ಆರಿಸಿ ಬರುತ್ತೇವೋ, ಇಲ್ಲವೊ ಎಂಬ ಗೊಂದಲದಲ್ಲಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಬಳಿಯೂ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.