ADVERTISEMENT

ಕುಡಿಯುವ ನೀರು: ರೂ 203 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಣದ ಕೊರತೆ ಇಲ್ಲ. ಅಗತ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಯುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ರೂ138 ಕೋಟಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ರೂ65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಎರಡು ವರ್ಷಗಳಿಂದ ಬರಗಾಲ ಇದ್ದ ಕಾರಣ ನೀರಿನ ಸಮಸ್ಯೆ ಇದೆ. ಇದನ್ನು ಬಗೆಹರಿಸಲು ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಇನ್ನು ಮುಂದೆ ನೀರಿನ ಸಮಸ್ಯೆ ಬಗ್ಗೆ ದೂರು ಬಂದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

224 ಗೋಶಾಲೆಗಳನ್ನು ತೆರೆಯಲಾಗಿದ್ದು, ಮಳೆಯಾಗುವವರೆಗೂ ಮುಂದುವರಿಯಲಿವೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಆದ್ಯತೆ ನೀಡಿದೆ. ಕೊಳವೆಬಾವಿಗಳನ್ನು ಕೊರೆದಿರುವ ಕಡೆ ಬಾಕಿ ಇರುವ ಹಣ ಪಾವತಿಸುವಂತೆ ಸೂಚಿಸಲಾಗಿದೆ ಎಂದರು.

ಕುಡಿಯುವ ನೀರಿನ ವ್ಯವಸ್ಥೆ, ಬರ ಪರಿಹಾರ ಇತ್ಯಾದಿಗಳಿಗಾಗಿ ಈ ವರ್ಷ ಕೇಂದ್ರ ಸರ್ಕಾರ ರೂ883 ಕೋಟಿ ನೀಡಿದೆ. ಇದಲ್ಲದೆ ರಾಜ್ಯ ಸರ್ಕಾರ ರೂ160 ಕೋಟಿ ವೆಚ್ಚ ಮಾಡಲಿದೆ. ಈಚೆಗೆ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಸಭೆಯಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

`ಶಿವಮೊಗ್ಗ ಜಿಲ್ಲೆಗೆ ರೂ25 ಕೋಟಿ ಹಣ ಬಿಡುಗಡೆ ಆಗಿದೆ. ಆದರೆ, ಮೂರು ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಅವರಿಗೆ ಬಿಸಿ ಮುಟ್ಟಿಸಿ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.

ರೂ 38 ಕೋಟಿ ಬಿಡುಗಡೆ: ಕೊಳವೆ ಬಾವಿಗಳನ್ನು ಕೊರೆಯುವುದಕ್ಕಾಗಿ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗಗಳಿಗೆ ರೂ38 ಕೋಟಿ ಬಿಡುಗಡೆ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಎಚ್.ಕೆ. ಪಾಟೀಲ ತಿಳಿಸಿದರು.

13ನೇ ಹಣಕಾಸು ಆಯೋಗದ ಅನುದಾನದಡಿ ನಿರ್ವಹಣೆಯ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು ಎಂದು ವಿಧಿಸಿದ್ದ ಷರತ್ತು ಸಡಿಲಿಸಲಾಗುವುದು ಎಂದರು.

ಸಾಲ ಕೊಡಿಸಿ: 155 ತಾಲ್ಲೂಕುಗಳಲ್ಲಿ ಬರಗಾಲ ಇದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಹಕಾರ ಸಂಘಗಳ ಮೂಲಕ  ಸಾಲ ಸಿಗುವಂತೆ ಮಾಡಿ ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಅನುದಾನ ಶೀಘ್ರ ಬಿಡುಗಡೆ
ಕೃಷಿ ಸಾಲಮನ್ನಾ ಯೋಜನೆಗೆ ಅಗತ್ಯವಿರುವ ರೂ 400-500 ಕೋಟಿ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೂ 3,500 ಕೋಟಿ ರೂಪಾಯಿ ಸಾಲಮನ್ನಾ ಮಾಡುವುದಾಗಿ ಘೋಷಿಸಿತ್ತು. ಆದರೆ, ಬಜೆಟ್‌ನಲ್ಲಿ ರೂ 940 ಕೋಟಿ ಮಾತ್ರ ಒದಗಿಸಿದ್ದರು. ಈ ವರ್ಷದ ಬಜೆಟ್‌ನಲ್ಲಿ ರೂ 800 ಕೋಟಿ ರೂಪಾಯಿ ಘೋಷಣೆ ಆಗಿದ್ದು, ರೂ 200 ಕೋಟಿ ಬಿಡುಗಡೆ ಆಗಿದೆ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ತಿಳಿಸಿದರು.

ಹಿಂದಿನ ಸರ್ಕಾರ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳದೆ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT